ಮೈಸೂರು : ಏ.16:- ಬಿಜೆಪಿಯಲ್ಲಿರುವ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಪ್ರಭಾವಿ ನಾಯಕರಾದ ಕಂದಾಯ ಸಚಿವ ಆರ್.ಅಶೋಕ ಮತ್ತು ವಸತಿ ಸಚಿವ ವಿ.ಸೋಮಣ್ಣ ಅವರ ರಾಜಕೀಯ ಭವಿಷ್ಯ ಮುಗಿಸಲು ಆರೆಸ್‍ಎಸ್ ತಂತ್ರಗಾರಿಕೆ ನಡೆಸಿದೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಆರೋಪಿಸಿದರು.
ಮೈಸೂರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸೋಮಣ್ಣ ಮತ್ತು ಅಶೋಕ ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸುವಷ್ಟು ಶಕ್ತಿ ಹೊಂದಿರುವ ತಮ್ಮಗಳ ಸಮುದಾಯದ ಪ್ರಭಾವಿ ನಾಯಕರು. ಇವರುಗಳ ರಾಜಕೀಯ ಭವಿಷ್ಯ ಮುಗಿಸಲು ಆರೆಸ್‍ಎಸ್ ವ್ಯವಸ್ಥಿತ ತಂತ್ರಗಾರಿಕೆ ನಡೆಸಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಮತ್ತು ಪ್ರಭಾವಿ ನಾಯಕರಾದ ಡಿ.ಕೆ.ಶಿವಕುಮಾರ್ ಎದುರು ಅಶೋಕ್ ಅವರನ್ನು ಮತ್ತು ಸಿದ್ದರಾಮಯ್ಯ ಎದುರು ಸೋಮಣ್ಣ ಅವರನ್ನು ಕಣಕ್ಕಿಳಿಸಿದೆ ಎಂದರು.
ಈ ಚುನಾವಣೆಯಲ್ಲಿ ಇಬ್ಬರು ನಾಯಕರು ಒಂದು ಕಡೆ ಸೋತರೂ ಮುಖ್ಯಮಂತ್ರಿ ಹುದ್ದೆಯನ್ನು ತಪ್ಪಿಸಬಹುದು. ಒಂದು ವೇಳೆ ಎರಡು ಕಡೆ ಸೋತರೆ ಇಬ್ಬರ ರಾಜಕೀಯ ಭವಿಷ್ಯವನ್ನೂ ಮುಗಿಸಬಹುದು ಎಂಬುದು ಆರೆಸ್‍ಎಸ್ ಲೆಕ್ಕಾಚಾರ ಎಂದು ವಿಶ್ವನಾಥ್ ಆರೋಪಿಸಿದರು. ಇದರೊಂದಿಗೆ ಒಂದೆಡೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಮನ್ನಣೆ ನೀಡುತ್ತಿದೆ ಎಂತಲೂ ಮತದಾರರ ಎದುರು ಹೇಳಬಹುದು. ಇದು ಆರೆಸ್‍ಎಸ್ ತನ್ನ ಗುಪ್ತ ಅಜೆಂಡಾ ರೂಪಿಸಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ದ್ರೋಹ ಮಾಡುತ್ತಿದೆ. ಈ ಬಗ್ಗೆ ಸಮುದಾಯದ ಮುಖಂಡರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.
ಸರ್ಕಾರಕ್ಕೆ ಸುಪ್ರೀಂ ಛೀಮಾರಿ:
ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ನಿಗದಿ ಮಾಡಿದ್ದ ಶೇ,4 2ಬಿ ಮೀಸಲಾತಿಯನ್ನು ಚುನಾವಣೆ ಕಾರಣ ಏಕಾಏಕಿ ರದ್ದು ಮಾಡಿ ಅದನ್ನು ಒಕ್ಕಲಿಗರಿಗೂ ಮತ್ತು ಲಿಂಗಾಯತರಿಗೆ ಹಂಚಿದ್ದು ದೋಷಪೂರಿತ ಎಂದು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದ್ದು, ಇನ್ನಾದರೂ ಸರ್ಕಾರ 2ಬಿ ಮೀಸಲಾತಿ ರದ್ದು ಮಾಡಿದ್ದನ್ನು ವಾಪಸ್ ಪಡೆಯಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.
ಸರ್ಕಾರದ ಈ ನಿರ್ಧಾರ ದೋಷಪೂರಿತ ಮತ್ತು ಜನ ವಿರೋಧಿ ತೀರ್ಮಾನ ಎಂದು ಸುಪ್ರೀಂ ಹೇಳಿದೆ. ತಮ್ಮ ನಿರ್ಧಾರ ನ್ಯಾಯಾಲಯದಲ್ಲಿ ನಿಲ್ಲಲ್ಲ ಎಂಬ ವಿಷಯ ಸರ್ಕಾರಕ್ಕೆ ಗೊತ್ತಿದ್ದರೂ ಚುನಾವಣೆ ಮುಂದಿಟ್ಟುಕೊಂಡು ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಮುಸಲ್ಮಾನರಿಂದ ಶೇ 4 ಮೀಸಲಾತಿ ಕಿತ್ತು 2ನ್ನು ಒಕ್ಕಲಿಗರಿಗೆ ಮತ್ತು ಉಳಿದ ಶೇ2ನ್ನು ಲಿಂಗಾಯತರಿಗೆ ಹಂಚಿಕೆ ಮಾಡಿದ್ದನ್ನು ಸ್ವತಂ ಒಕ್ಕಲಿಗ, ಲಿಂಗಾಯತ ಮುಖಂಡರು ಮತ್ತು ಸಮುದಾಯದ ಸ್ವಾಮೀಜಿಗಳೂ ಒಪ್ಪಲಿಲ್ಲ. ಒಬ್ಬರ ತಟ್ಟೆಯಲ್ಲಿದ್ದ ಅನ್ನವನ್ನು ಕಿತ್ತು ಇನ್ನೊಬ್ಬರಿಗೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮದೇ ಸಮುದಾಯಕ್ಕೆ ದ್ರೋಹ ಮಾಡಿದ್ದಾರೆ. ಬಸವೇಶ್ವರರು ಅವರನ್ನು ಕ್ಷಮಿಸುವುದಿಲ್ಲ ಎಂದರು.