ಅಶೋಕ್ ಬಂದು ಊಟ ಮಾಡಿ ಹೋಗಲಿ:ಡಿಕೆಶಿ ವ್ಯಂಗ್ಯ

ಬೆಂಗಳೂರು,ಏ.೧೨:ಕನಕಪುರ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಕಣಕ್ಕಿಳಿಯಲು ಸಾಮ್ರಾಟ್ ಆದರೂ ಬರಲಿ, ಚಕ್ರವರ್ತಿಯಾದರೂ ಬರಲಿ ಅವರ ಬದಲು ಕಾರ್ಯಕರ್ತರೂ ಬರಲಿ ಒಳ್ಳೆಯ ಮಿಲಿಟರಿ ಹೋಟೆಲ್‌ಗಳಿವೆ ಬಂದು ಊಟ ಮಾಡಿಕೊಂಡು ಹೋಗಲಿ, ಉತ್ತಮ ಆತಿಥ್ಯವನ್ನೂ ಕೊಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕನಕಪುರದಲ್ಲಿ ಸಚಿವ ಆರ್. ಅಶೋಕ್ ಸ್ಪರ್ಧೆಗೆ ಟಾಂಗ್ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವೀಳ್ಯದೆಲೆ ನೀಡಿ ಆರ್. ಅಶೋಕ್‌ರವರನ್ನು ಚುನಾವಣಾ ಕಣಕ್ಕೆ ಕರೆಯುತ್ತೇನೆ. ಅವರಿಗೆ ಒಳ್ಳೆಯದಾಗಲಿ, ಸ್ವಲ್ಪ ಸಮಯ ಕಳೆಯಲಿ ಎಂದು ವ್ಯಂಗ್ಯವಾಗಿ ಹೇಳಿದರು.
ರಾಜಕಾರಣ ಫುಟ್ಬಾಲ್ ಅಲ್ಲ, ಅದೊಂದು ಚದುರಂಗದಾಟ, ಬಿಜೆಪಿಯವರು ದಾಳಗಳನ್ನು ಉರುಳಿಸುತ್ತಿದ್ದಾರೆ. ಉರುಳಿಸಲಿ ಬಿಡಿ, ಅವರಿಗೆ ಶುಭವಾಗಲಿ, ರಾಜಕಾರಣದಲ್ಲಿ ಪ್ರತಿಸ್ಪರ್ಧೆ ಇರಬೇಕು ಎಂದರು.
ಹೋರಾಟ ನನಗೆ ಹೊಸದಲ್ಲ. ೧೯೮೫ ರಲ್ಲಿ ದೇವೇಗೌಡರವರ ವಿರುದ್ಧವೂ ಹೋರಾಡಿದ್ದೆ, ಕುಮಾರಸ್ವಾಮಿಯವರ ವಿರುದ್ಧವೂ ಹೋರಾಡಿದ್ದೇನೆ. ಈಗಲೂ ಹೋರಾಡುತ್ತಿದ್ದೇನೆ. ನನ್ನ ಜೀವನ ಹೋರಾಟದಿಂದ ಕೂಡಿದೆ ಎಂದರು.
ಪದ್ಮನಾಭ ನಗರದಲ್ಲಿ ಅಶೋಕ್ ವಿರುದ್ಧ ದುರ್ಬಲ ಅಭ್ಯರ್ಥಿ ಕಣಕ್ಕಿಳಿಸಿ ಒಳ ಒಪ್ಪಂದ ಮಾಡಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ನಾನು ಯಾರ ಜತೆಯೂ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಪದ್ಮರಾಜ್ ಸೇರ್ಪಡೆ
ಬಿಜೆಪಿಯ ಪಾಲಿಕೆ ಮಾಜಿ ಸದಸ್ಯ ಪದ್ಮರಾಜ್ ಸೇರಿದಂತೆ ಹಲವರನ್ನು ಇದೇ ಸಂದರ್ಭದಲ್ಲಿ ಪಕ್ಷಕ್ಕೆ ಬರಮಾಡಿಕೊಂಡ ಅವರು, ಇಂದು ಬಿಜೆಪಿಯಿಂದ ಪದ್ಮರಾಜ್, ಉಮೇಶ್ ಸೇರಿದಂತೆ ೪೫೦ಕ್ಕೂ ಹೆಚ್ಚು ಮುಖಂಡರು ಪಕ್ಷ ಸೇರಿದ್ದಾರೆ. ಬಿಜೆಪಿಯ ಪಟ್ಟಿ ಪ್ರಕಟವಾದ ನಂತರ ಆ ಪಕ್ಷದಲ್ಲಿ ಬಿರುಗಾಳಿ ಆರಂಭವಾಗಿದೆ. ಸಾವಿರಾರು ಬಿಜೆಪಿ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂದರು.
ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ಪ್ರಚಾರಕ್ಕೆ ಹೋಗುವ ಮೊದಲು ಮೋದಿ ಅವರು ಗ್ಯಾಸ್ ಸಿಲಿಂಡರ್‌ಗೆ ನಮಸ್ಕಾರ ಹಾಕಿದ್ದರು. ಅದರಂತೆ ನಾವೂ ಸಹ ಗ್ಯಾಸ್ ಸಿಲಿಂಡರ್‌ಗೆ ಹಾರ ಹಾಕಿ ನಮಸ್ಕಾರ ಹಾಕಿದ್ದೇವೆ. ನಮ್ಮೆಲ್ಲ ನಾಯಕರು, ಮತದಾರರು ಪ್ರಚಾರಕ್ಕೆ ಹೋಗುವ ಮುನ್ನ ಗ್ಯಾಸ್ ಸಿಲಿಂಡರ್‌ಗೆ ನಮಸ್ಕಾರ ಹಾಕುತ್ತಾರೆ ಎಂದು ವೇದಿಕೆಯಲ್ಲೇ ಗ್ಯಾಸ್ ಸಿಲಿಂಡರ್‌ಗೆ ಡಿಕೆಶಿ ನಮಸ್ಕರಿಸಿದರು.