ಅಶಾಂತಿಯ ನರಕದೃಶವಾದ ವೈಕುಂಠ ಶಾಂತಿಧಾಮ

ದಾವಣಗೆರೆ.ಜೂ.೧೧; ದಹನದೊಂದಿಗೆ ಶವ ಸಂಸ್ಕಾರ ಮಾಡುವ ಕೆಲವು ಸಮುದಾಯದವರು ಸೇರಿ ಕೀರ್ತಿಶೇಷ ಮೋತಿ ರಾಮರಾವ್‌ರವರ ಕಠಿಣ ಪರಿಶ್ರಮದ ನಾಯಕತ್ವದಲ್ಲಿ ಕಳೆದ ಎರಡುವರೆ ದಶಕಗಳ ಹಿಂದೆ ಸ್ಥಾಪನೆಗೊಂಡ ವೈಕುಂಠ ಟ್ರಸ್ಟ್ ವೈಕುಂಠ ಶಾಂತಿಧಾಮ ಇಂದು ಅವ್ಯವಸ್ಥೆಯ ಆಗರವಾಗಿ ಅಶಾಂತಿಯ ನರಕದೃಶವಾಗಿರುವುದು ವಿಷಾದದ ಸಂಗತಿ.ಅದರಲ್ಲೂ ಕರೋನಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಶವ ಸಂಸ್ಕಾರಕ್ಕೆ ಇದ್ದ ವಾಹನ “ಮೋಕ್ಷವಾಹಿನಿ” ಸಹ ಗುಜರಿಯಾಗಿ ಪಾಳು ಬಿದ್ದಿರುವುದು ಶವಗಳನ್ನು ಸಾಗಿಸಲು ಚಾಲಕನೂ ಇಲ್ಲದ ಈ ವಾಹನ ಹಾಳು ಕೊಂಪೆಗೆ ಬಿದ್ದಿದೆ. ಸರ್ಕಾರದ ನಿಯಮದಂತೆ ಹದಿನೈದು ವರ್ಷಗಳ ನಂತರ ಯಾವುದೇ ವಾಹನ ಬಳಸುವಂತಿಲ್ಲ ಎನ್ನುವುದು ಸರ್ವೆ ಸಾಮಾನ್ಯ.ದಿ. ಮೋತಿ ರಾಮರಾವ್‌ರವರು ಆ ಕಾಲದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಕಾಶಿಯಿಂದ ಶ್ರೀ ಶಿವಲಿಂಗವನ್ನು ತರಿಸಿ “ಕಾಶಿ ವಿಶ್ವನಾಥ ದೇವಾಲಯ” ಕಟ್ಟಿಸಿ, ಶವದ ದಹನದ ನಂತರ ಶ್ರಾದ್ಧ, ಪಿಂಡತರ್ಪಣ, ಧಾರ್ಮಿಕ ಕರ್ಮಾಧಿ ವಿಧಿ-ವಿಧಾನಗಳನ್ನು ನಡೆಸಲು ಅಚ್ಚುಕಟ್ಟಾದ ಸೂಕ್ತವಾದ ಸ್ಥಳಾವಕಾಶ ಕಲ್ಪಿಸಿ, ಅಂದಿನ ಸಿಬ್ಬಂದಿಗಳೂ ಅಷ್ಟೇ ನಿಷ್ಠೆಯಿಂದ ಮಾನವೀಯ ಮಾಲ್ಯದೊಂದಿಗೆ ಸೇವಾ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಈಗಿನ ವಾತಾವರಣ ಪೂರ್ಣ ಪ್ರಮಾಣದಲ್ಲಿ ಮೂಲೆಗುಂಪಾಗಿದೆ.ಸ್ವಚ್ಛತೆಗೆ ಸಿಬ್ಬಂದಿ ಇಲ್ಲ, ಇರುವ ಒಬ್ಬ ಸಿಬ್ಬಂದಿ ಶಿವನಪೂಜೆ, ದೇವಸ್ಥಾನ ಸ್ವಚ್ಛತೆ, ನಿರ್ವಹಣೆ, ಶವ ಸಂಸ್ಕಾರ, ದಹನ ಎಲ್ಲದನ್ನು ಮಾಡಲು ಕಷ್ಟ ಸಾಧ್ಯ. ಟ್ರಸ್ಟಿಗಳಲ್ಲಿ ಒಬ್ಬಿಬ್ಬರ ಸರ್ವಾಧಿಕಾರ ಧೋರಣೆಯಿಂದಾಗಿ ವೈಕುಂಠ ಶಾಂತಿ ಧಾಮ ಅಶಾಂತಿಧಾಮವಾಗುತ್ತಿರುವುದು ನೋವಿನ ಸಂಗತಿ.ಟ್ರಸ್ಟಿಗಳು ಆರ್ಥಿಕವಾಗಿ ಸಬಲತೆ ಇಲ್ಲದೇ ಹೊದರೆ ದಾನಿಗಳ ತವರು ದೇವನಗರಿಯಲ್ಲಿ ಸಾಕಷ್ಟು ದಾನ ಕೊಡುವವರು ಇದ್ದಾರೆ. ಅಥವಾ ಟ್ರಸ್ಟ್ ನಡೆಸಲು ಕಷ್ಟ ಸಾಧ್ಯವಾದರೆ ಜಿಲ್ಲಾಡಳಿತಕ್ಕೆ, ಮಹಾನಗರ ಪಾಲಿಕೆಗೆ ಅಥವಾ ಮುಜರಾಯಿ ಇಲಾಖೆಗೆ ಬಿಟ್ಟು ಕೊಡಬಹುದು. ಶ್ರೀಕ್ಷೇತ್ರ ಧರ್ಮಸ್ಥಳದ ಡಾ. ವೀರೇಂದ್ರ ಹೆಗಡೆ, ಇನ್ಪೂಸಿಸ್‌ನ ಶ್ರೀಮತಿ ಸುಧಾಮೂರ್ತಿ ಸೇರಿದಂತೆ ನಮ್ಮ ನಾಡಿನಲ್ಲಿ ಸಾಕಷ್ಟು ಸಹಕಾರ ಸಹಯೋಗ ನೀಡುವವರಿದ್ದಾರೆ. ಅವರಲ್ಲಿಯೂ ಮನವಿ ಮಾಡಿಕೊಳ್ಳಬಹುದು.ದಹನದೊಂದಿಗೆ ಶವ ಸಂಸ್ಕಾರ ಮಾಡುವ ಸಂಪ್ರದಾಯದ ಬ್ರಾಹ್ಮಣ ಸಮಾಜ, ಗೌಡ ಸಾರಸ್ವಾತ ಸಮಾಜ, ಪಾಟೀದಾರ ಸಮಾಜ, ಸೋಮವಂಶ ಆರ್ಯ ಕ್ಷತ್ರೀಯ ಸಮಾಜ, ಭಾವಸಾರ ಕ್ಷತ್ರೀಯ ಸಮಾಜ, ಬಂಟರ ಸಮಾಜ, ದೈವಜ್ಞ ಬ್ರಾಹ್ಮಣ ಸಮಾಜ, ವಿಶ್ವಕರ್ಮ ಸಮಾಜ ಸೇರಿದಂತೆ ಅನೇಕ ದಾನಿಗಳು ಆ ಕಾಲಕ್ಕೆ ಎರಡೆರಡು ಲಕ್ಷ ರೂಪಾಯಿಗಳನ್ನು ನೀಡಿ ಟ್ರಸ್ಟಿಗಳಾಗಿದ್ದಾರೆ. ಏಕಬೋಟೆ ಕುಟುಂಬ, ಅಂಬರ್‌ಕರ್ ಕುಟುಂಬ, ಕುರ್ಡೆಕರ್ ಕುಟುಂಬ, ವಿಠಲ್‌ಕರ್ ಕುಟುಂಬ, ನಗರ ರಾಧಾಕೃಷ್ಣ ನಾಯಕ ಕುಟುಂಬ ಹೀಗೆ ಅನೇಕ ಕುಟುಂಬಸ್ಥರು ವಂಶಪಾರಂಪರ್ಯ ಟ್ರಸ್ಟಿಗಳಾಗಿದ್ದಾರೆ. ಇಷ್ಟೇಲ್ಲಾ ಸಾಕಷ್ಟು ಆರ್ಥಿಕತೆ, ಸಬಲತೆ ಇರುವ ಈ ಟ್ರಸ್ಟ್ ಯಾಕೆ ನಿರ್ಲಕ್ಷದಿಂದ ಟ್ರಸ್ಟ್ ನಡೆಸುತ್ತಿದ್ದಾರೆ. ಉತ್ತರ ಟ್ರಸ್ಟಿಗಳೇ ಕೊಡಬೇಕಾಗಿದೆ.ಸಾರ್ವಜನಿಕವಾಗಿ ಶವ ಸಂಸ್ಕಾರಕ್ಕೆ ಅವಕಾಶವಿರುವ ಈ ವೈಕುಂಠಧಾಮ ಇವತ್ತಿನ ಪರಿಸ್ಥಿತಿಯಲ್ಲಿ ಅಲ್ಲಿಯ ಟ್ರಸ್ಟಿಗಳ ಕುಟುಂಬಗಳ ಶವ ಸಂಸ್ಕಾರಕ್ಕೆ ಹಣ ಪಾವತಿ ಮಾಡಿಯೂ ಸಕಾಲಕ್ಕೆ ವ್ಯವಸ್ಥೆ ಇಲ್ಲದೇ ಇರುವುದು ದುರಂತ. ವಾಹನ ಇದೆ ಚಾಲಕನಿಲ್ಲ, ಶವ ತೆಗೆದುಕೊಂಡು ಹೋಗಲು ದಹಿಸಲು ಕಟ್ಟಿಗೆ ಇಲ್ಲ, ಕಟ್ಟಿಗೆ ಇದ್ದರೂ ಒಣ ಕಟ್ಟಿಗೆ ಇಲ್ಲ, ಹಸಿ ಕಟ್ಟಿಗೆ ದಹನದಿಂದ ಇತ್ತೀಚಿಗೆ ಒಂದು ಹಗರಣ, ಅರ್ಧ ಸುಟ್ಟ ದೇಹ ಒಂದು ದಿನದ ನಂತರ ಮತ್ತೆ ಒಣ ಕಟ್ಟಿಗೆ ತರಸಿ ದೇಹ ದಹನವಾಗಿದ್ದು ಅವ್ಯವಸ್ಥೆಗೆ ಸಾಕ್ಷಿಭೂತವಾಗಿದೆ.ದಿ. ಮೋತಿ ರಾಮರಾವ್, ನಲ್ಲೂರು ಶಾಂತರಾಮ್, ಲಕ್ಷö್ಮಣ್‌ರಾವ್ ಏಕಬೋಟೆ, ಜಯಪ್ರಕಾಶ್ ಅಂಬರ್‌ಕರ್, ದಿ. ವೀರಪ್ಪ ಸುಬ್ರಾಯ ಕುರ್ಡೇಕರ್ ಮುಂತಾದ ಹಿರಿಯ ಚೇತನಗಳ ದೂರದೃಷ್ಟಿಯ ಮಾನವೀಯ ಮೌಲ್ಯಗಳ ದೇವರ ಪೂಜೆಯ ಸತ್ಕಾರ್ಯಗಳ ಸಫಲತೆಗೆ ಈಗಿನ ಯುವ ಪೀಳಿಗೆಗಳು ಮುಂದೆ ಬರಬೇಕಾಗಿದೆ ಮತ್ತು ವೈಕುಂಠ ಟ್ರಸ್ಟ್ನ ಪದಾಧಿಕಾರಿಗಳು ತತ್‌ಕ್ಷಣವೇ ಸೂಕ್ತಕ್ರಮದೊಂದಿಗೆ ವ್ಯವಸ್ಥಿತವಾಗಿ ಈ ವೈಕುಂಠ ಶಾಂತಿಧಾಮ ಮುನ್ನಡೆಯಲು ಸೇವಾ ಮನೋಭಾವದಿಂದ, ಇಚ್ಛಾಶಕ್ತಿಯಿಂದ, ಮಾನವೀಯ ಮೌಲ್ಯದೊಂದಿಗೆ ಕಾರ್ಯಗತರಾಗಬೇಕಾಗಿದೆ. ಇಲ್ಲವಾದರೆ ಜಿಲ್ಲಾಡಳಿತ, ಮುಜರಾಯಿ ಇಲಾಖೆಯವರು ಈ ಟ್ರಸ್ಟ್ ಬಗ್ಗೆ ಗಮನ ಹರಿಸಿ, ಸೂಕ್ತಕ್ರಮ ಕೈಗೊಳ್ಳಲು ನೊಂದ ವಿವಿಧ ಸಮುದಾಯದ ಸಮಾಜ ಬಾಂಧವರು ವಿನಂತಿಸಿದ್ದಾರೆ.