ಅಶಕ್ತರ ಪರವಾಗಿ ಧ್ವನಿ ಎತ್ತುವುದೇ ಚಳವಳಿ

ತುಮಕೂರು, ಜು. ೧೩- ಅಶಕ್ತರ ಪರವಾಗಿ ದ್ವನಿ ಎತ್ತುವುದೇ ನಿಜವಾದ ಚಳವಳಿ ಎಂದು ಕಸಾಪ ಮಾಜಿ ಅಧ್ಯಕ್ಷೆ ಹಾಗೂ ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು.
ನಗರದ ಐಎಂಎ ಸಭಾಂಗಣದಲ್ಲಿ ತುಮಕೂರು ನಾಗರಿಕ ವೇದಿಕೆ ವತಿಯಿಂದ ನಾಗರಿಕ ಸಮಾಜದಲ್ಲಿ ಸಾಮಾಜಿಕ ಚಳವಳಿಗಳು ಎಂಬ ವಿಚಾರ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನಪರ ಚಳವಳಿಗಳಿಗೆ ಬೆಂಬಲ ಲಭ್ಯವಾಗುತ್ತದೆ ಎಂಬುದಕ್ಕೆ ತುಮಕೂರಿನಲ್ಲಿ ಕೆ.ಎನ್.ಉಮೇಶ್ ಮತ್ತು ಗೆಳೆಯರು ಹಾಗು ಕೆ.ದೊರೆರಾಜು ಅವರ ಬದ್ದತೆ ದೂರದೃಷ್ಟಿಯಲ್ಲಿ ಒಳ್ಳೆಯ ಫಲ ನೀಡಿವೆ ಎಂದರು.
ಹಿರಿಯ ಚಿಂತಕರಾಗಿರುವ ದೊರೆರಾಜು ತಮ್ಮ ವೃತ್ತಿ ಜೀವನದಲ್ಲಿ ಮತ್ತು ಹೋರಾಟ ಎರಡರಲ್ಲಿಯೂ ಜಾತಿ, ಧರ್ಮ,ಭಾಷೆ ಮೀರಿ ಅನ್ಯಾಯದ ವಿರುದ್ಧ ದ್ವನಿ ಎತ್ತಿದ್ದಾರೆ. ಚಳವಳಿಯನ್ನು ಹೇಗೆ ಕಟ್ಟಬೇಕು ಎಂಬುದಕ್ಕೆ ಮಾದರಿಯಾಗಿದ್ದಾರೆ ಎಂದರು.
ಕೆ.ಎನ್.ಉಮೇಶ್ ಕಾನೂನು ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಸಾಮಾಜಿಕ ಪಿಡುಗಾಗಿದ್ದ ವರದಕ್ಷಿಣೆ ವಿರುದ್ದ ಹೋರಾಟಕ್ಕೆ ವರದಕ್ಷಿಣೆ ವಿರೋಧಿ ವೇದಿಕೆ ಕಟ್ಟಿ ಹಲವಾರು ಪ್ರರಕಣಗಳನ್ನು ಬೆಳಕಿಗೆ ತಂದು ನ್ಯಾಯ ಒದಗಿಸಿದರು ಎಂದರು.
ಕೆ.ದೊರೆರಾಜು ಮಾತನಾಡಿ, ನಾನು ಹುಟ್ಟಿದ ಪರಿಸರ ನನ್ನನ್ನು ಹೋರಾಟಕ್ಕೆ ಧುಮುಕುವಂತೆ ಮಾಡಿತ್ತು. ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ ಸಂಘ ಕಟ್ಟಿ ಕಾಲೋನಿ ಸ್ವಚ್ಚ ಮಾಡುವುದು ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡೆವು. ಇದರ ಫಲವಾಗಿ ಕಿರುಕುಳ ನಡೆದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದವು. ಅಂದು ಚಳವಳಿಗಾರರಿಗೆ ಪೊಲೀಸ್ ಬೆಂಬಲ ದೊರೆಯುತಿತ್ತು, ಸತ್ಯದ ಪರವಾಗಿ ಕೆಲಸ ಮಾಡುತ್ತಿದ್ದರು. ಹೆಂಡಬೇಡ ಶಾಲೆ ಕೊಡಿ, ವೃದ್ಧಾಪ್ಯ ವೇತನ ಅಭಿಯಾನ ಇನ್ನಿತರ ಕಾರ್ಯಕ್ರಮಗಳು ಜನರು ನಮ್ಮ ಮೇಲೆ ನಂಬುವಂತೆ ಮಾಡಿತ್ತು. ಇದರ ಫಲವಾಗಿ ಸಾಮೂಹಿಕ ಸಮಸ್ಯೆಗಳನ್ನು ಪ್ರಭುತ್ವದ ಎದುರು ತೆರೆದಿಡುವಂತೆ ಮಾಡಿತ್ತು ಎಂದರು.
ಜನರಿಗೆ ಹೋರಾಟದ ಮಂಚೂಣಿಯಲ್ಲಿರುವ ವ್ಯಕ್ತಿಯ ಮೇಲೆ ಇವ ನಮ್ಮ ದಾರಿ ತಪ್ಪಿಸಲ್ಲ ಎಂಬ ನಂಬಿಕೆ ಹುಟ್ಟಬೇಕು. ರಾಜಕೀಯ ಅಮಿಷಗಳಗೆ ಬಲಿಯಾಗಬಾರದು. ಹಿಂದೆ ಚಳವಳಿಗಾರರನ್ನು ಎದುರಿಸುವ ರಾಜಕೀಯ ಪಕ್ಷಗಳು ಇದ್ದವು. ಆದರೆ ಇಂದು ಚಳವಳಿಗಾರರನ್ನು ಇಲ್ಲದ ಕೇಸು ಹಾಕಿ ಜೈಲಿಗೆ ಕಳುಹಿಸುವ ಕೆಲಸ ನಡೆಯುತ್ತಿದೆ. ಇದರಿಂದ ಯುವಜನರು ಚಳವಳಿಯಿಂದ ವಿಮುಖರಾಗುತ್ತಿದ್ದಾರೆ. ತೊಂದರೆಯಿದ್ದರು ಹೊಂದಿಕೊಂಡು ಹೋಗುವ ಮನೋಭಾವ ರೂಢಿಸಿಕೊಳ್ಳುತ್ತಿದ್ದಾರೆ. ಇಂತಹ ಮನಸ್ಥಿತಿಯ ಯುವಕರನ್ನು ಚಳವಳಿಗೆ ಕರೆತರಲು ಹೊಸ ಯೋಜನೆಯನ್ನು ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇಂದು ಎಡಚಿಂತನೆಗಳ ಬಗ್ಗೆ ಅಪಪ್ರಚಾರವಿದೆ. ಒಂದು ಕಾಲದಲ್ಲಿ ಎದೆತಟ್ಟಿ ಹೇಳುತ್ತಿದ್ದ ಬಡತನ, ನಿರುದ್ಯೋಗ, ದೌರ್ಜನ್ಯ ವಿರುದ್ದ ಮಾತನಾಡುತ್ತಿದ್ದ ಜನರು, ಇಂದು ನಾವು ಎಡಚಿಂತನೆಯವರು ಎಂದು ಪರಿಚಯಿಸಿಕೊಂಡರೆ, ನಮ್ಮ ಪರಿಚಿತರೇ ನಮ್ಮಿಂದ ದೂರ ಸರಿಯುವ ಪ್ರಯತ್ನ ಮಾಡುತ್ತಿರುವುದು ದುಸ್ತರ ಎಂದರು.
ಸಿಐಟಿಯು ರಾಷ್ಟ್ರೀಯ ಮಂಡಳಿಯ ಸದಸ್ಯ ಎನ್.ಉಮೇಶ್ ಮಾತನಾಡಿ, ಚಳವಳಿಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಉದಾರೀಕರಣ, ಖಾಸಗೀಕರಣದ ಫಲವಾಗಿ, ಉಚಿತ ಎಂಬುದು ಮರಿಚೀಕೆಯಾಗಿದೆ. ಚಳವಳಿಗಳು ಇದ್ದರೂ ಅವುಗಳು ಕಣ್ಣಿಗೆ ಕಾಣದಂತೆ ನೋಡಿಕೊಳ್ಳಲಾಗುತ್ತದೆ. ಅದರು ಪ್ರಧಾನಿಯೊಬ್ಬರು ರೈತರ ಚಳವಳಿಗೆ ಹೆದರಿ ತಾವೇ ತಂದ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ಚಳವಳಿ ಬಲಿಷ್ಠವಾಗಿರುವುದಕ್ಕೆ ಸಾಕ್ಷಿ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಉತ್ತರ ವಿವಿಪರೀಕ್ಷಾಂಗ ಕುಲಸಚಿವ ಡೋಮನಿಕ್ ವಹಿಸಿದ್ದರು. ಸೂಫಿಯ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ರಮೇಶ್, ಎ.ನರಸಿಂಹಮೂರ್ತಿ ಉಪಸ್ಥಿತರಿದ್ದರು.