“ಅವ್ವ ನೀ ಸಾಯಬಾರದಿತ್ತು” ಕಥಾ ಸಂಕಲನ ಪುಸ್ತಕ ಲೋಕಾರ್ಪಣೆ

ಬೀದರ:ನ.6: ಕೆಂಪುನೆಲದ ಗಟ್ಟಿಗಿತ್ತಿ ಸಾಹಿತಿ, ಕಥೆಗಾರ್ತಿ ಬಿ.ಜೆ. ಪಾರ್ವತಿ ವಿ. ಸೋನಾರೆ ಅವರು ಬರೆದಿರುವ ಅವ್ವ ನೀ ಸಾಯಬಾರದಿತ್ತು ಕಥಾ ಸಂಲಕಲನದ 7 ಕಥೆಗಳು ಓದುಗರನ್ನು ಗಟ್ಟಿಯಾಗಿ ಹಿಡಿದಿಕೊಂಡು ಓದುವಂತೆ ಮಾಡುವ ಶಕ್ತಿ ಕಥಾ ಸಂಕಲದಲ್ಲಿದೆ ಎಂದು ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಅಭಿಪ್ರಾಯಪಟ್ಟರು.

ನಗರದ ಡಾ. ಚನ್ನಬಸವ ಪಟ್ಟದೇವರ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಜಾನಪದ ಕಲಾವಿದರ ಬಳಗ ವತಿಯಿಂದ ಕಥೆಗಾರ್ತಿ ಬಿ.ಜೆ. ಪಾರ್ವತಿ ಸೋನಾರೆ ಅವರು ಬರೆದಿರುವ “ಅವ್ವ ನೀ ಸಾಯಬಾರದಿತ್ತು” ಎಂಬ ಕಥಾ ಸಂಕಲನ ಪುಸ್ತಕ ಬಿಡುಗಡೆ ಮಾತನಾಡಿದರು.

ಹೂವಿನಲ್ಲಿ ಮುಳ್ಳುಗಳು ಇದ್ದಂತೆಯೇ ಕಥೆಗಳು ಶಬ್ಧಮಣಿಗಳ ಹಂದರಲ್ಲಿ ಓದುಗರು ಒಂದು ಕಥೆ ಓದಿದ ಇನ್ನೊಂದು, ಮತ್ತೊಂದು ಕಥೆ ಓದಬೇಕು ಎಂಬ ಮನಸ್ಸು ಮಾಡುವಂತೆ ಕಥೆಗಳು ರಚನೆ ಮಾಡಿದ್ದಾರೆ. ಅನುಭವದಲ್ಲಿ ಅಮೃತವಿದೆ ಎಂಬಂತೆ ಪಾರ್ವತಿ ಸೋನಾರೆ ಅವರು ಮಹಿಳೆಯರು ಅದರಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರ ಮೇಲೆ ಕಥೆಗಳ ಮೂಲಕ ಬೆಳಕು ಚೆಲ್ಲೂವ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗಟ್ಟಿಗತ್ತಿ ಕಥೆಗಾರ್ತಿಯಾಗಿ ಗುರುತಿಸಿಕೊಳ್ಳುತ್ತಿರುವುದು ಬೀದರ ಜಿಲ್ಲೆಯ ಹೆಮ್ಮೆಯ ಎಂದರು.

ಸಾನಿಧ್ಯ ವಹಿಸಿದ್ದ ಭಾಲ್ಕಿ ಹೀರೆಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದೇವರು ಮಾತನಾಡುತ್ತ, 12ನೇ ಶತಮಾನದಲ್ಲಿ ಬಸವಾದಿ ಶರಣರು ಮಹಿಳೆಯರನ್ನು ತಾಯಿ ಸ್ಥಾನ ನೀಡಿ, ಗೌರವಿಸಿದರು. 21ನೇ ಶತಮಾನದಲ್ಲಿ ಪಾರ್ವತಿ ಸೋನಾರೆ ಅವರು ತಾಯಿ ಬಗ್ಗೆ ಅಗಾಧವಾದ ಪ್ರೀತಿಯ ಕುರಿತು ಅವ್ವ ನೀ ಸಾಯಬಾರದಿತ್ತು ಕಥಾ ಸಂಕಲನದ ಮೂಲಕ ತಾಯಿ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ಪಾರ್ವತಿ ಸೋನಾರೆ ಹಾಗೂ ವಿಜಯಕುಮಾರ ಸೋನಾರೆ ಅವರ ಸತಿಪತಿಗಳ ಜೋಡಿ, ಶಿವ-ಪಾರ್ವತಿ ಜೋಡಿಯಂತಿದೆ ಎಂದರು.

ಶಾಹಿನ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಅಬ್ದುಲ್ ಖದೀರ್ ಮಾತನಾಡುತ್ತ, ಜಿಲ್ಲೆಯಲ್ಲಿ ಶಾಹೀನ ಶಿಕ್ಷಣ ಸಂಸ್ಥೆ ಮತ್ತು ಭಾಲ್ಕಿ ಹಿರೇಮಠ ಸಂಸ್ಥಾನ ಮಕ್ಕಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಸರುವಾಸಿಯಾಗಿವೆ. ಈ ಸಂಸ್ಥೆಗಳಲ್ಲಿ ಓದಿರುವ ಮಕ್ಕಳು ಉತ್ತಮ ನಾಗರಿಕರಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಕಥೆಗಾರ್ತಿ ಬಿ.ಜೆ. ಪಾರ್ವತಿ ವಿ. ಸೋನಾರೆ ಅವರು ಮಾತನಾಡುತ್ತ, ನನ್ನ ಮೊದಲ ಕಥಾ ಸಂಕಲನ ಭವರಿ ಪುಸ್ತಕ್ಕೆ ಪ್ರಶಸ್ತಿ ಬಂತು. ನಾನೂ ಕಥೆಗಳು ಬರೆಯಲು ಆರೋಗ್ಯ ಇಲಾಖೆ ಸೇವೆ ಸಲ್ಲಿಸುತ್ತಿರುವ ನನಗೆ ದಿನನಿತ್ಯ ಹೊಸ ಹೊಸ ಜನರು ಹಾಗೂ ಅವರ ಬದುಕುಗಳು ನೋಡಿದ್ದೇನೆ. ಮಹಿಳೆಯರು ಹೇಳಿಕೊಳ್ಳುವ ನೋವು-ನಲಿವು ಹಾಗೂ ತಲ್ಲಣಗಳು ಕಥೆ ರೂಪದಲ್ಲಿ ಹೊರಹೊಮ್ಮುತ್ತಿವೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ನೆಲಮೂಲದ ಗಟ್ಟಿ ಸಾಹಿತ್ಯ ರಚನೆಯ ಮೂಲಕ ಪಾರ್ವತಿ ಸೋನಾರೆ ಅವರು ಜಿಲ್ಲೆಯಲ್ಲಿ ಮನೆ ಮಾತಾಗಿದ್ದಾರೆ. ಮಕ್ಕಳು ತಂದೆ-ತಾಯಿಯನ್ನು ಎಂದೆಂದಿಗೂ ನೋವಿಸಬಾರದು. ತಂದೆ-ತಾಯಿ ಕಣ್ಣಲ್ಲಿ ಕಣ್ಣೀರು ಬರದಂತೆ ನೋಡಿಕೊಳ್ಳಬೇಕು ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಯಾದಗಿರಿ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಅವರು ಮಾತನಾಡಿದರು.

ವೇದಿಕೆಯ ಮೇಲೆ ಡಾ. ಜಿಲ್ಲಾ ಆರ್.ಸಿ.ಎಚ್. ಆರೋಗ್ಯ ಅಧಿಕಾರಿ ಡಾ. ರವೀಂದ್ರ ಶಿರಸಿ, ಘೋಡಂಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಶೀದ್ ಹಾಸ್ಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಹಿರಿಯ ಸಾಹಿತಿ ಜಯದೇವಿ ದುಬುಲಗುಂಡೆ, ಹಿರಿಯ ಆರೋಗÀ್ಯ ಸಹಾಯಕಿ ಲಕ್ಷ್ಮೀ ಮುಂತಾದವರು ಇದ್ದರು.

ಈ ಸಂದರ್ಭದಲ್ಲಿ ನೀಟ್ ಪರೀಕ್ಷೆಯಲ್ಲಿ ದೇಶದಲ್ಲಿ 9ನೇ ಮತ್ತು 85ನೇ ರ್ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿ ತಂದ ವಿಧ್ಯಾರ್ಥಿಗಳಾದ ಕಾರ್ತಿಕ ರೆಡ್ಡಿ ಮತ್ತು ಎಂ.ಡಿ. ಅರ್ಬಾಜ ಅಹ್ಮದ್ ಹಾಗೂ ಕೋವಿಡ್-19 ಕೊರೋನಾ ವೈರಸ್ ನಿಯಂತ್ರಣ ಮಾಡುವಲ್ಲಿ ವಿಶೇಷ ಕಾಳಜಿ ವಹಿಸಿದ್ದ ಘೋಡಂಪಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಶೀದ್ ಹಾಗೂ ಆರೋಗ್ಯ ಸಿಬ್ಬಂದಿಗಳಾದ ರೀಟಾ ಮಠಪತಿ, ಪ್ರೇಮಲತಾ, ಸುಕೀರ್ತಾ, ಝರೇಮ್ಮಾ, ಶಕುಂತಲಾ, ಪ್ರಮೋದ, ಶಿವಲೀಲಾ, ಸ್ನೇಹಲತಾ, ಧೂಳಪ್ಪಾ, ಅನೀಲ, ರೆಹಮಾನ, ವಿಲ್ಸನ್, ರಿಯಾಜ್, ನಾಗೇಶ ಡಪಲಾಪೂರೆ ಅವರು ಸೇರಿದಂತೆ ಇತರರನ್ನು ವಿಶೇಷವಾಗಿ ಸನ್ಮಾನಿಸಿ, ಗೌರವಿಸಲಾಯಿತು.

ಪ್ರಾರಂಭದಲ್ಲಿ ವಿಜಯಕುಮಾರ ಸೋನಾರೆ ಸ್ವಾಗತಿಸಿದರೆ, ದೇವಿದಾಸ್ ಜೋಶಿ ನಿರೂಪಿಸಿದರು. ಕೊನೆಯಲ್ಲಿ ಓಂಕಾರ ಪಾಟೀಲ್ ವಂದಿಸಿದರು.