ಅವ್ಯವಹಾರ: ಕ್ರಮಕ್ಕೆ ಆಗ್ರಹಿಸಿ ಸತ್ಯಾಗ್ರಹ

ಬ್ಯಾಡಗಿ,ನ22: ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ನಡೆಸದೇ ಸುಮಾರು 17ಲಕ್ಷಕ್ಕೂ ಹೆಚ್ಚು ಹಣವನ್ನು ಬಿಲ್ ಮಾಡಿ ತೆಗೆಯುವ ಮೂಲಕ ಭಾರಿ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಗ್ರಾಮ ಪಂಚಾಯತಿ ಕಾರ್ಯಾಲಯದ ಎದುರು ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಕೈಗೊಂಡ ಘಟನೆ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ಜರುಗಿದೆ.
ಸೋಮವಾರ ಬೆಳಿಗ್ಗೆ ಗ್ರಾಮ ಪಂಚಾಯತಿ ಕಾರ್ಯಾಲಯದ ಎದುರು ಶಾಮಿಯಾನ ಹಾಕಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸುವ ಮೂಲಕ ಪಂಚಾಯತಿಯಲ್ಲಿ ನಡೆದಿರುವ ಅವ್ಯವಹಾರದ ವಿರುದ್ದ ತಮ್ಮ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ ಗ್ರಾಮಸ್ಥರಾದ ಶಿವಯೋಗಿ ಶಿಡೇನೂರ ಹಾಗೂ ಶಂಭು ಪುಟ್ಟನಗೌಡ್ರ ಅವರು ನರೇಗಾ ಯೋಜನೆ ಸೇರಿದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರವನ್ನು ತನಿಖೆ ನಡೆಸಿ ತಪ್ಪಿತಸ್ಥರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಾಂತಿಯುತ ಹೋರಾಟ ನಡೆಸಿದ್ದು, ಇವರ ಹೋರಾಟಕ್ಕೆ ಇತರ ಗ್ರಾಮಸ್ಥರು ಬಾಹ್ಯ ಬೆಂಬಲವನ್ನು ನೀಡಿದ್ದಾರೆ ಎಂದರು.
ಪ್ರತಿಭಟನೆಯ ಸುದ್ದಿ ತಿಳಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಅವರು ಸ್ಥಳಕ್ಕೆ ಪಂಚಾಯತ್ ರಾಜ್ ವಿಭಾಗದ ಸಹಾಯಕ ನಿರ್ದೇಶಕ ಸತೀಶ ಮೂಡೇರ ಅವರನ್ನು ಕಳುಹಿಸಿ ಸಂಧಾನ ಮಾಡಲು ಮುಂದಾದರೂ ಸಹ ಅದಕ್ಕೆ ಬಗ್ಗದ ಗ್ರಾಮಸ್ಥರು ಹಿರಿಯ ಅಧಿಕಾರಿಗಳು ಬಂದು ಈ ಬಗ್ಗೆ ಸ್ಪಷ್ಟನೆ ನೀಡಿ ಅವ್ಯವಹಾರವನ್ನು ಮಾಡಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಎಚ್ಚರಿಸಿ ರಾತ್ರಿಯವರೆಗೂ ಪ್ರತಿಭಟನೆಯನ್ನು ಮುಂದುವರೆಸಿದರು.
ಗ್ರಾಮ ಪಂಚಾಯತಿ ಕಾರ್ಯಾಲಯದ ಎದುರು ರಾತ್ರಿ ಅಲ್ಲಿಯೇ ಮಲಗಿ ಪ್ರತಿಭಟನೆಯ ಕಾವು ಹೆಚ್ಚಿಸಿದ ಗ್ರಾಮಸ್ಥರ ಹೋರಾಟಕ್ಕೆ ಕೊನೆ ಹಾಡಲು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಅವರೇ ಗ್ರಾಮಕ್ಕೆ ಬರಬೇಕಾಯಿತು. ಪ್ರತಿಭಟನಾ ನಿರತರನ್ನು ಮನವೊಲಿಸಲು ಯತ್ನಿಸಿದ ಅವರು ನರೇಗಾ ಯೋಜನೆಯಡಿ ಅವ್ಯವಹಾರ ನಡೆದಿರುವುದು ಕಂಡು ಬಂದಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ದುರ್ಬಳಕೆ ಆಗಿರುವ ಹಣವನ್ನು ಸರ್ಕಾರಕ್ಕೆ ಮರು ಪಾವತಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದಾಗ ಪ್ರತಿಭಟನಾ ನಿರತ ಗ್ರಾಮಸ್ಥರು ತಮ್ಮ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಸಹದೇವಪ್ಪ ಬನ್ನಿಹಳ್ಳಿ, ನರೇಗಾ ಸಹಾಯಕ ನಿರ್ದೇಶಕ ಶಂಕರ ಕಿಚಡಿ, ಪಿಡಿಓ ಜಗದೀಶ ಮಣ್ಣಮ್ಮನವರ, ಗ್ರಾಪಂ ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.