ಅವ್ಯವಹಾರ: ಕಾನೂನು ಕ್ರಮದ ಭರವಸೆ

ಲಕ್ಷ್ಮೇಶ್ವರ,ಜು.24: ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ, ಭ್ರಷ್ಟಾಚಾರ, ಮಾಹಿತಿ ನಿರಾಕರಣೆ ಸೇರಿದಂತೆ ಅನೇಕ ಲೋಪ ದೋಷಗಳಿದ್ದು ಅವುಗಳನ್ನು ತನಿಖೆ ನಡೆಸುವಂತೆ ಆಗ್ರಹಿಸಿ ಸ್ವತಃ ಗ್ರಾಮ ಪಂಚಾಯಿತಿ ಸದಸ್ಯರೇ ಕಳೆದ ಮೂರು ದಿನಗಳಿಂದ ಗ್ರಾಮ ಪಂಚಾಯಿತಿ ಎದುರಿಗೆ ಸತ್ಯಾಗ್ರಹ ನಡೆಸಿದ್ದರು.
ಗ್ರಾಮಕ್ಕೆ ಶನಿವಾರ ಆಗಮಿಸಿದ್ದ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮೌನೇಶ್ ಬಡಿಗೇರ ಅವರು ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಹೆಸರಿನಲ್ಲಿ ಬರೆದ ಮನವಿ ಪತ್ರವನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಸಲ್ಲಿಸಲಾಯಿತು. ಮನವಿ ಪತ್ರ ಸ್ವೀಕರಿಸಿದ ಕಾರ್ಯನಿರ್ವಾಹಕ ಅಧಿಕಾರಿಗಳು, 15 ದಿನಗಳ ಒಳಗಾಗಿ ಸಮಗ್ರ ತನಿಖೆ ನಡೆಸಿ ಅವ್ಯವಹಾರಗಳು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ, ಸತ್ಯಾಗ್ರಹಿಗಳು ತಮ್ಮ ಪ್ರತಿಭಟನೆಯನ್ನು ಹಿಂದೆ ಪಡೆದರು.
ಈ ಸಂದರ್ಭದಲ್ಲಿ ಪ್ರವೀಣ್ ಸೂರಣಗಿ, ಅರ್ಜುನ್ ಕಾರ್ಬಾರಿ, ತುಕಪ್ಪ ಪೂಜಾರ್, ಪ್ರಕಾಶ್ ಕಳ್ಳಿಹಾಳ, ರಾಜಶೇಖರ್ ಮೇಲ್ಮರಿ, ಸಂದೀಪ್ ಮೇಲ್ಮರಿ, ಕುಮಾರ್ ಬೆಟಗೇರಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.