ಅವ್ಯವಹಾರದ ತನಿಖೆಗೆ ಆಗ್ರಹಿಸಿ ಜಿಲ್ಲಾ ಸಹಕಾರ ಬ್ಯಾಂಕ್‍ಗೆ ಆ. 18ರಂದು ಮುತ್ತಿಗೆ

ಕಲಬುರಗಿ :ಜು.31: ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್‍ನಲ್ಲಿ ವ್ಯಾಪಕ ಪ್ರಮಾಣದಲ್ಲಿ ಅವ್ಯವಹಾರ ಆಗಿದ್ದು, ಈ ಕುರಿತು ತನಿಖೆ ಮಾಡಬೇಕು ಎಂದು ಒತ್ತಾಯಿಸಿ ಆಗಸ್ಟ್ 18ರಂದು ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ರೈತ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ ಆಲೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್‍ನಲ್ಲಿ ರೈತರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಅವರ ಹೆಸರಿನ ಮೇಲೆ ಅವ್ಯವಹಾರ ಮಾಡಲಾಗಿದೆ ಎಂದು ಆರೋಪಿಸಿದರು.
ಬ್ಯಾಂಕ್‍ನಲ್ಲಿ ಸ್ವಜನ ಪಕ್ಷಪಾತ ಹಾಗೂ ತಾರತಮ್ಯವನ್ನು ಸಾಲ ನೀಡಿಕೆಯಲ್ಲಿ ಮಾಡಲಾಗುತ್ತಿದೆ. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಮತ್ತು ಸಿದ್ಧರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಲಾಗಿತ್ತು. ಸಾಲ ಮನ್ನಾ ಮಾಡಿದ ರೈತರಿಗೆ ಹೊಸ ಸಾಲ ನೀಡುವ ಆದೇಶ ಹೊರಡಿಸಲಾಗಿತ್ತು. ಆದಾಗ್ಯೂ, ಈವರೆಗೂ ಸಾಲ ನೀಡಿಲ್ಲ. ಬದಲಾಗಿ ತಮಗೆ ಬೇಕಾದವರಿಗೆ ಎಲ್ಲ ರೀತಿಯ ಸೌಲತ್ತುಗಳನ್ನು ನೀಡುತ್ತಿದ್ದಾರೆ ಎಂದು ಅವರು ದೂರಿದರು.
ಜಿಲ್ಲಾ ಸಹಕಾರ ಬ್ಯಾಂಕ್ ನೂತನ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರದಿಂದ ಹತ್ತು ಕೋಟಿ ರೂ.ಗಳು ಬಂದಿದೆ. ಆದಾಗ್ಯೂ, ಕಳೆದ ಹತ್ತು ವರ್ಷಗಳಿಂದ ಬ್ಯಾಂಕ್ ರೈತರಿಗೆ ನೀಡುವ ಬೆಳೆ ಸಾಲ ಹಾಗೂ ಬೆಳೆ ವಿಮೆ ಹಣದಲ್ಲಿ 500ರೂ.ಗಳನ್ನು ವಂತಿಗೆ ರೂಪದಲ್ಲಿ ಪಡೆಯಲಾಗುತ್ತಿದೆ. ಎರಡೂ ಜಿಲ್ಲೆಗಳಲ್ಲಿ 231 ಸೊಸೈಟಿಗಳಿದ್ದು, ಪ್ರತಿ ರೈತರಿಂದ 500ರೂ.ಗಳ ವಸೂಲಿಯಿಂದ ಒಟ್ಟು ಆರು ಕೋಟಿ ರೂ.ಗಳು ಸಂಗ್ರಹವಾಗಿದೆ. ರೈತರಿಂದ ಹಣ ಕಡಿತಗೊಳಿಸುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.
ಸಮಿತಿಯ ಉಪಾಧ್ಯಕ್ಷ ಹಣಮಂತ್ ಹೂಗಾರ್ ಅವರು ಮಾತನಾಡಿ, ಬ್ಯಾಂಕ್‍ನಿಂದ ಇಡೀ ಜಿಲ್ಲೆಯಲ್ಲಿ 36 ಕೋಟಿ ರೂ.ಗಳ ಅವ್ಯವಹಾರವಾಗಿದೆ. ಜೇವರ್ಗಿ ಸೇರಿದಂತೆ ಇತರೆ ಶಾಖೆಗಳಲ್ಲಿ ರೈತರ ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ಕೊಳ್ಳೆ ಹೊಡೆಯಲಾಗಿದೆ. ಬ್ಯಾಂಕ್ ಜಾರಿಗೆ ತಂದ ಪೈಪ್‍ಲೈನ್ ಯೋಜನೆ ನಿರ್ದೇಶಕರ ಪಾಲಾಗುತ್ತಿದೆ. ಅರ್ಜಿಗಳನ್ನು ಹಣಕ್ಕಾಗಿ ಮಾರಾಟ ಮಾಡಲಾಗುತ್ತಿದೆ. ಕೂಡಲೇ ಈ ಕುರಿತು ತನಿಖೆ ಕೈಗೊಳ್ಳುವಂತೆ ಹಾಗೂ ನೂತನ ಕಟ್ಟಡಕ್ಕಾಗಿ ಪ್ರತಿ ರೈತರಿಂದ ವಸೂಲಿ ಮಾಡಿರುವ 500ರೂ.ಗಳನ್ನು ಮರಳಿ ಅವರಿಗೆ ಕೊಡುವಂತೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಪ್ರಕಾಶ್ ಪಾಟೀಲ್ ಯತ್ನಾಳ್, ನಾಗರಾಜ್ ಬಾಳಿ, ಶರಣಬಸಪ್ಪ ಹೊನ್ನಕೇರಿ ಮುಂತಾದವರು ಉಪಸ್ಥಿತರಿದ್ದರು.