ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು, ಡಿ.07:- ಮಹಾರಾಣಿ ಮಹಿಳಾ ವಿಜ್ಞಾನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ವಿಜ್ಞಾನ ವಸತಿ ನಿಲಯದ ಊಟದ ಮತ್ತು ನೀರಿನ ಅವ್ಯವಸ್ಥೆ ಕುರಿತು ಪ್ರತಿಭಟನೆಯನ್ನು ನಡೆಸಿ, ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿಗಳ ಸಹಾಸ್ತವನ್ನು ಬೇಡಿದ್ದಾರೆ.
ಇಂದು ಮೈಸೂರಿನ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರು ಮಾತನಾಡಿ, ವಸತಿ ನಿಯಲವು ಅಕ್ಟೋಬರ್ 18 ರಿಂದಲೇ ಪ್ರಾರಂಭವಾಗಿದ್ದರೂ, ವಸತಿ ನಿಲಯದಲ್ಲಿ ಸರಿಯಾದ ಊಟದ ಮತ್ತು ನೀರಿನ ವ್ಯವಸ್ಥೆಯೇ ಇಲ್ಲ ಇದರಿಂದ ನಿಲಯದಲ್ಲಿನ ವಿದ್ಯಾರ್ಥಿನಿಯರು ಹೊರಗಿನ ಊಟವನ್ನು ಸೇವಿಸುತ್ತಿದ್ದು, ಇದರಿಂದ ಎಲ್ಲರ ಆರೋಗ್ಯದಲ್ಲಿ ಏರುಪೇರುಗಳು ಕಂಡು ಬರಿತ್ತಿವೆ. ಇದರಿಂದ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ.
ಇದರ ಬಗ್ಗೆ ನಾವು ನಮ್ಮ ನಿಲಯದ ಪಾಲಕರು ಹಾಗೂ ಕಾಲೇಜಿನ ಪ್ರಾಂಶುಪಾಲರ ಬಳಿ ದೂರು ನೀಡಿದ್ದೆವು. ಪ್ರಾಂಶುಪಾಲರು ವಿದ್ಯಾರ್ಥಿನಿಯರ ಪರವಾಗಿ ಅವರ ಕೈಯಲ್ಲಿ ಆದ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ, ಆದರೂ ಈ ಸಮಸ್ಯೆ ಬಗೆಹರಿಯುವ ಸೂಚನೆಯೇ ಕಾಣುತ್ತಿಲ್ಲ. ಹಾಗಾಗೀ ನಮ್ಮ ವಸತಿ ನಿಲಯದ ಎಲ್ಲಾ ವಿದ್ಯಾರ್ಥಿನಿಯರು ಚರ್ಚಿಸಿ ಜಿಲ್ಲಾಧಿಕಾರಿಗಳಿಗೆ ಈ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದು ಸಹಾಯಸ್ತವನ್ನು ಬೇಡಿದ್ದೇವೆ ಎಂದು ತಿಳಿಸಿದ್ದಾರೆ.