ಅವ್ಯವಸ್ಥೆಯ ಆಗರ ಆಶ್ರಯ ಮನೆಗಳು: ನಿವಾಸಿಗಳಿಗೆ ತಪ್ಪದ ನರಕಯಾತನೆ

ಕಲಬುರಗಿ: ನ.8: ನಿರ್ಗತಿಕರು ಮತ್ತು ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ವಿವಿಧ ಯೋಜನೆಗಳ ಅಡಿಯಲ್ಲಿ ನಗರದ ಹೊರವಲಯದ ಕೆಸರಟಗಿ ಬಳಿ ಆಶ್ರಯ ಮನೆಗಳನ್ನು ನಿರ್ಮಿಸಲಾಗಿದೆ. ಆದಾಗ್ಯೂ, ಸೌಕರ್ಯಗಳಿಲ್ಲದೇ ಆ ಮನೆಗಳು ಅವ್ಯವಸ್ಥೆಯಿಂದ ಕೂಡಿದ್ದು, ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.
ಮಹಾನಗರ ಪಾಲಿಕೆಯಿಂದ ನಿರ್ಮಿಸಿರುವ 1300ಕ್ಕೂ ಹೆಚ್ಚು ಆಶ್ರಯ ಮನೆಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ, ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆಯಿಂದ ಪರದಾಡುತ್ತಿದ್ದೇವೆ. ಅಷ್ಟಲ್ಲದೇ ರಸ್ತೆ ಸಂಪರ್ಕ ಕೂಡ ಇಲ್ಲ. ಅಧಿಕಾರಿ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂಬುದು ನಿವಾಸಿಗಳ ಅಳಲಾಗಿದೆ.
ಆಶ್ರಯ ಕಾಲೋನಿಯಲ್ಲಿ ಬಹುತೇಕ ಮನೆಗಳು ಕಳಪೆ ಮಟ್ಟದಿಂದ ಕೂಡಿವೆ. ಈಗಾಗಲೇ ಭಾಗಶ: ಮನೆಗಳು ಬಿರುಕು ಬಿಟ್ಟಿವೆ. ಮಳೆ ಬಂದರೆ ಸೋರುತ್ತವೆ. ಮನೆಯಲ್ಲಿದ್ದೇವೆಯೋ ಅಥವಾ ನೀರಿನಲ್ಲಿ ವಾಸವಾಗಿದ್ದೇವೆಯೋ ಎಂಬಂತಾಗಿದೆ. ಒಟ್ಟಿನಲ್ಲಿ ಭಯದಲ್ಲಿಯೇ ಕಾಲ ಕಳೆಯುತ್ತಿದ್ದೇವೆ ಎಂಬುದು ನಿವಾಸಿಗಳ ಆಂತಕದ ಮಾತು.
ಯಾವುದೇ ಮೂಲಭೂತ ಸೌಕರ್ಯವಿಲ್ಲ. ಬಸ್ ಸಂಚಾರವಿಲ್ಲ. ಲಾಲೋನಿಯಿಂದ ಒಂದೂವರೆ ಕಿ.ಮೀ. ದೂರದಲ್ಲಿ ಬಸ್ ನಿಲ್ದಾಣವಿದೆ. ನಿತ್ಯ ದಉಡಿಯಲು ನಗರಕ್ಕೆ ಹೋಗಬೇಕು. ಆದಾಗ್ಯೂ, ಅಲ್ಪ ಲಾಭದಲ್ಲಿ ಬದುಕುವುದು ಕಷ್ಟವಾಗಿದೆ. ಹೀಗಿರುವಾಗ ನೂರಾರು ರೂ.ಗಳನ್ನು ಆಟೋಕ್ಕಾಗಿ ಖರ್ಚು ಮಾಡುವುದು ಅನಿವಾರ್ಯವಾಗಿದೆ ಎಂದು ನಿವಾಸಿಗಳು ನೋವು ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗೆ ಶಾಲೆಯೂ ಇಲ್ಲ. ಮತ್ತೊಂದೆಡೆ ಸಮರ್ಪಕವಾಗಿ ಮನೆ ಹಂಚಿಕೆ ಮಾಡಿಲ್ಲ. ಹಣವಂತರು ಯೋಜನೆ ಲಾಭ ಪಡೆದಿದ್ದು, ಆಗಾಗ ಬಂದು ವಾಸ ಇರುವವರ ಜೊತೆಗೆ ಜಗಳವಾಡಿ ಹೋಗುತ್ತಾರೆ. ಇಲ್ಲಿ ಒಂದಿಷ್ಟು ಜನ ಅರ್ಹರಿದ್ದಾರೆ. ಅವರಿಗೂ ಮನೆ ನೀಡಬೇಕು. ಈ ಕುರಿತು ಮಹಾನಗರ ಪಾಲಿಕೆಗೆ ಎಷ್ಟು ಬಾರಿ ಹೇಳಿದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಕುರಿತು ಸರ್ಕಾರ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದರು.