ಅವೈಜ್ಞಾನಿಕ ಹೈವೇ50 ರಸ್ತೆ ನಿರ್ಮಾಣ.
ಹಳ್ಳಿಗಳ ಕ್ರಾಸ್ಗಳಲ್ಲಿ ನಿಲ್ದಾಣ ನಿರ್ಮಿಸದ ಹೈವೇ ಪ್ರಾಧಿಕಾರ, ಜನರ ದೂರು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು.12 :-  ಹೈವೇ ರಸ್ತೆ ನಿರ್ಮಾಣಮಾಡುವಾಗ ಹಳ್ಳಿಗಳಿರುವ ಕ್ರಾಸ್ ಬಳಿ ನಿಲ್ದಾಣ ಮಾಡಿದ್ದರೆ ಸಾರ್ವಜನಿಕರು  ಬಿಸಿಲು ಮಳೆಯಿಂದ ಕಾಪಾಡಿಕೊಳ್ಳಲು ಅನುಕೂಲವಾಗತ್ತಿತ್ತು  ಆದರೆ ಹೈವೇ 50 ರಸ್ತೆ ನಿರ್ಮಾಣ ಮಾಡಿರುವ ರಸ್ತೆಗಳಲ್ಲಿ ಕೂಡ್ಲಿಗಿ ತಾಲೂಕಿನ ಅನೇಕ ಕ್ರಾಸ್ ಬಳಿ ಮುಖ್ಯವಾಗಿ ನಿರ್ಮಿಸಬೇಕಾದ ನಿಲ್ದಾಣವನ್ನೇ ನಿರ್ಮಿಸದೆ ಹೈವೇ ರಸ್ತೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ಗ್ರಾಮೀಣ ಭಾಗದ ಜನತೆ ಹೈವೇ ಪ್ರಾಧಿಕಾರವನ್ನು ದೂರುತ್ತಿದೆ.
ಕೂಡ್ಲಿಗಿಯಿಂದ ಕೆಲವೇ ಕಿಲೋಮೀಟರ್ ಗಳ ದೂರದಲ್ಲಿರುವ ಮೊರಬ, ಅಮ್ಮನಕೆರೆ, ಸೇರಿದಂತೆ ಮುಖ್ಯವಾಗಿರುವ ಗ್ರಾಮೀಣ ರಸ್ತೆಗಳ  ಹೈವೇ ಪಕ್ಕದಲ್ಲಿರುವ ಕ್ರಾಸ್ ಗಳಲ್ಲಿ ಒಂದು ನಿಲ್ದಾಣ ನಿರ್ಮಿಸದೆ ಪ್ರಾಧಿಕಾರ ಅವೈಜ್ಞಾನಿಕತೆಯನ್ನು ಮೆರೆದಿದ್ದು ಹೈವೇ ಪ್ರಾಧಿಕಾರ ಮಾಡಿರುವ ಎಡವಟ್ಟಿನಿಂದ ಅಮ್ಮನಕೆರೆ ಕ್ರಾಸ್ ಬಳಿ ಹೈವೇ 13 ರಸ್ತೆ ಇದ್ದಾಗ ನಿಲ್ದಾಣವಿತ್ತು ಆದರೆ ಹೈವೇ 50ರಸ್ತೆ ನಿರ್ಮಿಸುವಾಗ ಇದ್ದ ನಿಲ್ದಾಣ ಕೆಡವಿದ್ದು ಅದನ್ನು ಪುನ್ಹ ನಿರ್ಮಿಸುವ ಗೋಜಿಗೆ ಪ್ರಾಧಿಕಾರ ಮುಂದಾಗದೆ ಇಂದು ಜನರ ಅನಾನುಕೂಲಕ್ಕೆ ದಾರಿಯಾಗಿದೆ ಈ ಕ್ರಾಸ್ ಬಳಿ ಅಮ್ಮನಕೆರೆ, ಮೊರಬದ ಜನತೆ  ಬೇರೆಡೆ ದೂರದ ಚಿತ್ರದುರ್ಗ, ಬೆಂಗಳೂರು ಕಡೆ ಹೋಗಲು ಬೇಸಿಗೆಯಲ್ಲಿ ಉರಿಬಿಸಿಲಲ್ಲಿ ನಿಲ್ಲಬೇಕು, ಮಳೆಗಾಲದಲ್ಲಿ ತೊಯ್ದುಕೊಂಡು ನಿಲ್ಲಬೇಕು ಆಸರೆಯಾಗಿ ಇಲ್ಲಿ ನಿಲ್ದಾಣ ನಿರ್ಮಿಸದ ಎಡವಟ್ಟಿನಿಂದ ಇಲ್ಲೇ ಪಕ್ಕದ ಪ್ರೌಢಶಾಲೆಯ ವಿದ್ಯಾರ್ಥಿ / ವಿದ್ಯಾರ್ಥಿನೀಯರು ಶಾಲೆ ಮುಗಿಸಿಕೊಂಡು ತಮ್ಮ ತಮ್ಮ  ಗ್ರಾಮಗಳಿಗೆ ತೆರಳಲು ಈ ಕ್ರಾಸ್ ಬಳಿ ಬಸ್ಸಿಗಾಗಿ ಇತ್ತೀಚಿಗೆ ಸುರಿಯುತ್ತಿರುವ ಮಳೆಯಲ್ಲಿ ತೊಯ್ದುಕೊಂಡೆ ಕುಳಿತ ಪ್ರಸಂಗ ದಿನನಿತ್ಯ ಕಾಣುತ್ತಿದೆ ಆದರೆ ಇಂತಹ ಮುಖ್ಯವಾದ ಸ್ಥಳದಲ್ಲೇ ಇದ್ದ ನಿಲ್ದಾಣ ಕೆಡವಿ ಹೈವೇ ರಸ್ತೆ ನಿರ್ಮಾಣವಾದ ನಂತರ ಜನರಿಗೆ ಅನುಕೂಲವಾಗಿದ್ದ ತಂಗುದಾಣ ನಿರ್ಮಿಸದೆ ಪ್ರಾಧಿಕಾರ ಮೈಮರೆತು ಕುಳಿತಿದೆ.  
ಅಷ್ಟೇ ಅಲ್ಲದೆ  ಅನೇಕ ರೈತರ ಜಮೀನುಗಳನ್ನು ಹೈವೇ ರಸ್ತೆಗೆ ವಶಕ್ಕೆ ಪಡೆದು ಪರಿಹಾರ ನೀಡಿರುವುದು ಸರಿ ಆದರೆ ಫ್ಲೈ ಓವರ್ ನಿರ್ಮಿಸುವ ಜಾಗದಲ್ಲಿ ರೈತರು ಜಮೀನುಗಳಿಗೆ ತೆರಳಲು ಸರ್ವಿಸ್ ರಸ್ತೆ ನಿರ್ಮಿಸದೆ ಬಂಡಿ ಓಡಾಡಲು ಸಹ ತೊಂದರೆ ಅನುಭವಿಸುವ ಉದಾಹರಣೆ ಶಿವಪುರ ಸಮೀಪದ ಪೌಲ್ಟ್ರಿ ಫಾರ್ಮ್ ಎದುರಿಗೆ ಇರುವ ಜಮೀನಿಗೆ ಹೋಗುವ ರೈತರ ಗೋಳು ತೀರದಾಗಿದೆ ಮತ್ತು ರೈತರ ಪಹಣಿಯಲ್ಲಿ ಹೈವೇ ಪ್ರಾಧಿಕಾರ ಜಂಟಿಯಾಗಿ ನಮೂದಾಗಿದ್ದು ಅದನ್ನು ರೈತರಿಗೆ ಪೋಡಿ ಮಾಡಿಕೊಡುವಲ್ಲಿ ಸಹ ಹೈವೇ ಪ್ರಾಧಿಕಾರ ವಿಫಲವಾಗಿದೆ. ರೈತರು ಯಾವುದೇ ಸಾಲ ಸೌಲಭ್ಯ ಪಡೆಯಲು ಬ್ಯಾಂಕ್ ಗಳಿಗೆ ಬೆಳೆ ಸಾಲ ಕೇಳಲು ಹೋದರೆ ಪಹಣಿಯಲ್ಲಿ ಹೈವೇ ಪ್ರಾಧಿಕಾರದ ಜಂಟಿ ಇರುವುದರಿಂದ ಸಾಲ ಸೌಲಭ್ಯ ಸಹ ಸಿಗದಂತಾಗಿದ್ದು ಈ ಸಮಸ್ಯೆ ಬಗೆಹರಿಸುವಲ್ಲಿ  ಹೈವೇ ಪ್ರಾಧಿಕಾರ  ಮುಂದಾಗದೆ ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದು ರೈತರು ತಮ್ಮ ಗೋಳನ್ನು ತೋಡಿಕೊಳ್ಳುತ್ತಿದ್ದಾರೆ.
ಬಣವಿಕಲ್ಲು ಗ್ರಾಮದಲ್ಲಿ ಹೈವೇ ರಸ್ತೆಯಿಂದ ಸರ್ವಿಸ್ ರಸ್ತೆ ನಿರ್ಮಿಸುವಲ್ಲಿಯೂ ಅವೈಜ್ಞಾನಿಕತೆ ತೋರಿದ್ದರಿಂದ ಮಳೆಗಾಲದಲ್ಲಿ ಸರ್ವಿಸ್ ರಸ್ತೆ ಪಕ್ಕದ ತಗ್ಗಿನಲ್ಲಿರುವ ಜನತೆಯ ಮನೆಯೊಳಗೆ ಮತ್ತು ಮನೆಯಂಗಳದಲ್ಲಿ ಮಿನಿಕೆರೆಯಂತೆ  ನೀರು ನಿಲ್ಲುತ್ತಿವೆ ಹಾಗೂ ಮಸೀದಿಯೊಳಗೆ ನೀರು ನುಗ್ಗಿ ಪ್ರಾರ್ಥನೆಗೂ ಅನಾನುಕೂಲವಾಗುತ್ತಿರುವ ಗೋಳು ಇಂದಿಗೂ ಬಗೆಹರಿಯದ ಸಮಸ್ಯೆಯಾಗಿದೆ  ಈ ಸಮಸ್ಯೆ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟ ಸಹ ಆಗಿದೆ ಹಾಗೂ ಸ್ಥಳಕ್ಕೆ ತಾಲೂಕು ದಂಡಾಧಿಕಾರಿಗಳು ಸಹ ಅನೇಕ ಬಾರಿ ಭೇಟಿ ನೀಡಿ ಹೈವೇ ಪ್ರಾಧಿಕಾರದ ಗಮನಕ್ಕೆ ತಂದರು ಸಮಸ್ಯೆ ಪರಿಹರಿಸುವಲ್ಲಿ ಪ್ರಾಧಿಕಾರ ಮುಂದಾಗಿಲ್ಲ ಎಂದು ಹೇಳಬಹುದಾಗಿದೆ.
ಅಮ್ಮನಕೆರೆ ಕ್ರಾಸ್ ಸೇರಿದಂತೆ ಮುಖ್ಯವಾದ ಕ್ರಾಸ್ ಬಳಿ ನಿಲ್ದಾಣ ವ್ಯವಸ್ಥೆ ಕಲ್ಪಿಸುವ ಕೆಲಸ  ಹೈವೇ ಪ್ರಾಧಿಕಾರ ಮಾಡುವಲ್ಲಿ ಮುಂದಾಗಬೇಕು,  ರೈತರ ಪಹಣಿಯಲ್ಲಿ ಜಂಟಿ ಇರುವುದನ್ನು ಪೋಡಿ ಮಾಡಿಸಿ ರೈತರು  ಸಾಲಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡುವುದರ ಜೊತೆಗೆ ಫ್ಲೈ ಓವರ್ ರಸ್ತೆ ನಿರ್ಮಿಸುವ ಜಾಗದಲ್ಲಿ ರೈತರ ಜಮೀನಿಗೆ ಹೋಗುವ ರಸ್ತೆಗೆ ಸರ್ವಿಸ್ ರಸ್ತೆ ನಿರ್ಮಿಸಿಕೊಡುವಲ್ಲಿ ಹೈವೇ ಪ್ರಾಧಿಕಾರ ಮುಂದಾಗುವುದೋ ಅಥವಾ ಇಲ್ಲವೋ ಕಾದುನೋಡಬೇಕಿದೆ.