ಅವೈಜ್ಞಾನಿಕ ಸಂಚಾರ ನಿಯಮ; ಜನರು ಹೈರಾಣ

ವಿಶೇಷ ವರದಿ
ಕಲಬುರಗಿ,ಜೂ 20: ಸಂಚಾರಿ ಪೆÇಲೀಸರು ರೂಪಿಸಿದ ಅವೈಜ್ಞಾನಿಕ ಟ್ರಾಫಿಕ್ ನಿಯಮದಿಂದಾಗಿ ಕೇಂದ್ರ ಬಸ್ ನಿಲ್ದಾಣದ ಎದುರಿನ ಬಡಾವಣೆಗಳ ನಿವಾಸಿಗಳು ನಿತ್ಯ ಹೈರಾಣಾಗುವ ಸ್ಥಿತಿ ನಿರ್ಮಾಣವಾಗಿದೆ.
ಆಟೋ ರಿಕ್ಷಾ ಚಾಲಕರ ಮನಸೋಇಚ್ಛೆ ಪಾಕಿರ್ಂಗ್ ತಡೆಯುವುದರ ಜೊತೆಗೆ ಕೇಂದ್ರ ಬಸ್ ನಿಲ್ದಾಣ ಪ್ರವೇಶಿಸುವ ಹಾಗೂ ಅಲ್ಲಿಂದ ನಿರ್ಗಮಿಸುವ ಬಸ್ ಸಂಚಾರಕ್ಕೆ ತೊಂದರೆ ಉಂಟಾಗದಂತೆ ಇತ್ತೀಚೆಗೆ ಸಂಚಾರಿ ಪೆÇಲೀಸರು ಕೇಂದ್ರ ಬಸ್ ನಿಲ್ದಾಣದ ರಸ್ತೆಗೆ ಸಂಪರ್ಕ ಕಲ್ಪಿಸುವ ಬಡಾವಣೆಗಳ ಒಳ ರಸ್ತೆಗಳಿಗೆ ಎಲ್ಲೆಂದರಲ್ಲಿ ಬ್ಯಾರಿಕೇಡ್ ಹಾಕುತ್ತಿದ್ದಾರೆ. ಇದರಿಂದಾಗಿ, ವಿದ್ಯಾನಗರದಿಂದ ಕೇಂದ್ರ ಬಸ್ ನಿಲ್ದಾಣದ ಕಡೆಗೆ ಬರುವ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅದರಲ್ಲೂ ಮುಖ್ಯವಾಗಿ ಸೆಂಟ್ರಲ್ ಮಾಲ್ ಪಕ್ಕದಿಂದ ಹಾಯ್ದು ಸಂಜೆವಾಣಿ ಕಚೇರಿ ಎದುರಿನಿಂದ ವಿದ್ಯಾನಗರ ಬಡಾವಣೆ ಕಡೆಗೆ ತೆರಳುವ ವಾಹನ ಸವಾರರಿಗೆ ಈ ರಸ್ತೆಯಲ್ಲಿ ಪ್ರಯಾಣಿಸಲು ನಿರ್ಬಂಧ ಹೇರಲಾಗಿದೆ. ಅದರಲ್ಲೂ, ವಿದ್ಯಾನಗರದಿಂದ ಈ ರಸ್ತೆ ಮೂಲಕ ಬಂದು ಬಸ್ ನಿಲ್ದಾಣದ ರಸ್ತೆ ತಲುಪಬೇಕೆಂಬ ವಾಹನ ಸವಾರರು ಬ್ಯಾರಿಕೇಡ್ ಅಳವಡಿಸಿರುವ ಕಾರಣಕ್ಕಾಗಿ ಪುನಃ ಹಿಂದಿರುಗಿ ಹೋಗಬೇಕಾದ ಅನಿವಾರ್ಯತೆ ಸವಾರರು ನರಕ ಯಾತನೆ ಅನುಭವಿಸುವಂತೆ ಮಾಡಿದೆ ಎಂದು ವಿದ್ಯಾನಗರ ಬಡಾವಣೆಯ ಮಹಾದೇವ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಇಷ್ಟಕ್ಕೂ ಬಸ್ ನಿಲ್ದಾಣ ಎದುರಿನ ಮುಖ್ಯರಸ್ತೆಯಲ್ಲಿ ಆಟೋರಿಕ್ಷಾಗಳ ಅಸಂಬದ್ಧ ಪಾರ್ಕ್ ನಿಂದಾಗಿ ಅಸಲೀ ಸಂಚಾರ ಸಮಸ್ಯೆ ಉದ್ಭವಿಸುತ್ತಿದೆ. ಹಾಗಾಗಿ, ಕೇವಲ ಆಟೋ ರಿಕ್ಷಾಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಒಂದಿಬ್ಬರು ಸಂಚಾರಿ ಪೇದೆಗಳನ್ನು ನಿಯೋಜಿಸಿದರೂ ಸಂಚಾರ ದಟ್ಟಣೆ ನಿಯಂತ್ರಿಸಬಹುದಾಗಿದೆ. ಆದರೆ, ಅಂತಹ ಸರಳ ಮಾರ್ಗವನ್ನು ಅನುಸರಿಸುವ ಬದಲು ಇಡೀ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟಾಗುವಂತೆ ಬ್ಯಾರಿಕೇಡ್ ಅಳವಡಿಸಿರುವುದು ಉಲ್ಟಾ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಶಾಂತಿನಗರದ ಗೃಹಿಣಿಯೊಬ್ಬರು ವಿಷಾದ ವ್ಯಕ್ತಪಡಿಸುತ್ತಾರೆ.


ಪೆÇಲೀಸ್ ಕಮಿಷನರ್ ಏನಂತಾರೆ?
ಕೇಂದ್ರ ಬಸ್ ನಿಲ್ದಾಣದ ಮುಖ್ಯ ರಸ್ತೆಯಿಂದ ವಿದ್ಯಾನಗರದ ಕಡೆಗೆ ಹೋಗುವ ರಸ್ತೆಗಳಿಗೆ ಅಡ್ಡಲಾಗಿ ಸಂಚಾರಿ ಪೆÇಲೀಸರು ಮನಸ್ಸಿಗೆ ಬಂದಂತೆ ಬ್ಯಾರಿಕೇಡ್ ಅಳವಡಿಸಿರುವ ಕ್ರಮ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಹಾಗಾಗಿ, ಖುದ್ದು ಪೆÇಲೀಸ್ ಕಮಿಷನರ್ ಚೇತನ್ ಕುಮಾರ್ ಅವರು ಕೇಂದ್ರ ಬಸ್ ನಿಲ್ದಾಣ ಎದುರಿನ ರಸ್ತೆಯ ಮೇಲಿನ ಬ್ಯಾರಿಕೇಡ್ ಸಮಸ್ಯೆಯ ಕುರಿತು ಸಾಕ್ಷಾತ್ ಪ್ರತ್ಯಕ್ಷ ಪರಿಶೀಲನೆ ಕೈಗೊಳ್ಳುವುದು ಒಳ್ಳೆಯದು ಎಂದು ವಿದ್ಯಾನಗರ ಬಡಾವಣೆಯ ನ್ಯಾಯವಾದಿಯೊಬ್ಬರು ಸಲಹೆ ನೀಡುತ್ತಾರೆ.