ಅವೈಜ್ಞಾನಿಕ ಶುಲ್ಕ ನೀತಿ ಕೈಬಿಡದಿದ್ದರೆ ದಾವಣಗೆರೆ ವಿಶ್ವ ವಿದ್ಯಾನಿಲಯಕ್ಕೆ ಮುತ್ತಿಗೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೧೭; ವಿಶ್ವವಿದ್ಯಾಲಯದ ಕುಲಪತಿ, ಕುಲ ಸಚಿವರ ಏಕ ಪಕ್ಷೀಯ ನಿರ್ಧಾರದಿಂದ ಜಾರಿಗೆ ತರಲಾಗಿರುವ ಅವೈಜ್ಞಾನಿಕ ಹೆಚ್ಚುವರಿ ಶುಲ್ಕ ಮತ್ತು ಕಾರ್ಯ ಯೋಜನೆಗಳನ್ನು ಸರಿಪಡಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ವಿವಿಧ ಪ್ರಗತಿಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ‌ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್, ಸರ್ಕಾರವು ಶಿಕ್ಷಣ ಬಲ ಪಡಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೇ ಸರ್ಕಾರಿ ಕಾಲೇಜುಗಳಿಗೆ ಪ್ರವೇಶ ಕೋರಿ ಬರುವ ಯಾವುದೇ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನಿರಾಕರಿಸದೇ ಪ್ರವೇಶ ನೀಡಬೇಕು ಎಂದು ತಿಳಿಸಿದೆ. ಆದರೆ ದಾವಣಗೆರೆ ವಿಶ್ವವಿದ್ಯಾಲಯ ಮಾತ್ರ ಪ್ರವೇಶ ಕೋರಿ ಬರುವ ವಿದ್ಯಾರ್ಥಿಗಳಿಗೆ ಮೂರು ಪಟ್ಟು ಶುಲ್ಕ ವಸೂಲಿ ಮಾಡಲಾಗುತ್ತದೆ ಎಂದು ದೂರಿದರು.ಈ ಕುರಿತಂತೆ ರಾಜ್ಯದ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಹಾಗೂ ರಾಜ್ಯಪಾಲರು, ಜಿಲ್ಲಾಡಳಿತ ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಸರ್ಕಾರದ ಆದೇಶ ಇಲ್ಲದೇ ಸ್ವಯಂ ಪ್ರೇರಿತವಾಗಿ ಶುಲ್ಕ ಹೆಚ್ಚಳ ಮಾಡುವುದು ಸರಿಯಲ್ಲ. ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸದೇ ಯಾವುದೇ ಕಾನೂನು ರೂಪಿಸುವುದು ಕಾನೂನು ಬಾಹಿರ. ‌ಕಾರಣ ಈ ಕೂಡಲೇ ದಾವಣಗೆರೆ ವಿಶ್ವವಿದ್ಯಾಲಯ ತನ್ನ ಅವೈಜ್ಞಾನಿಕ ಶುಲ್ಕ ನೀತಿ ಪಡೆಯ ಬೇಕು. ಇಲ್ಲವಾದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರ ಅವೈಜ್ಞಾನಿಕ ನೀತಿಯಿಂದ ಸಾವಿರಾರು ಸಂಖ್ಯೆಯ ಅತಿಥಿ ಉಪನ್ಯಾಸಕರು ಕರ್ತವ್ಯದಿಂದ ಬಿಡುಗಡೆ ಹೊಂದಿ ಸಂಬಳ ಇಲ್ಲದೆ ಅತಂತ್ರಕ್ಕೆ ಒಳಗಾಗಿದ್ದಾರೆ. ಕಡಿಮೆ ಸಂಖ್ಯೆಯಲ್ಲಿ ಇರುವ ಖಾಯಂ ಅಧ್ಯಾಪಕರ ಮುಂದೆ ಪದವಿ ಪರೀಕ್ಷೆ ನಡೆಸುವುದು ಕಷ್ಟವಾಗಿದೆ. ಇದರ ನಡುವೆ ಪರೀಕ್ಷಾ ಮೌಲ್ಯ ಮಾಪನ ಕಾರ್ಯದಿಂದಾಗಿ ತರಗತಿಯಲ್ಲಿ ಬೋಧನೆ ಮಾಡಲು ಅಧ್ಯಾಪಕರು ಇಲ್ಲದೇ ವಿದ್ಯಾರ್ಥಿಗಳು ಅತಂತ್ರ ಸ್ಥಿತಿ ತಲುಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಟಿಯಲ್ಲಿ ಡಿಎಸ್ ಎಸ್ ಭೀಮವಾದದ ಎಲ್.ಆರ್.ಚಂದ್ರಪ್ಪ, ಡಿಎಸ್ ಎಸ್ ಅಂಬೇಡ್ಕರ್ ವಾದದ ರಾಜ್ಯ ಸಂಘಘನಾ ಸಂಚಾಲಕ ವೆಂಕಟೇಶ್ ಬಾಬು, ಇಪ್ಟಾದ ಸಂಚಾಲಕ ಪುರಂದರ ಲೋಕಿಕೆರೆ ಇದ್ದರು.