ಅವೈಜ್ಞಾನಿಕ ರಸ್ತೆ ತಿರುವು: ಸುರಕ್ಷತಾ ಕ್ರಮಕ್ಕೆ ಆಗ್ರಹ

ಪಾವಗಡ, ನ. ೬- ಸೀಮಾಂಧ್ರದ ಪೆನುಕೊಂಡ ಮತ್ತು ಮಡಕಶಿರಾ ತಾಲ್ಲೂಕುಗಳಿಗೆ ಸಂಪರ್ಕ ಕಲ್ಪಿಸುವ ತಾಲ್ಲೂಕಿನ ದೊಮ್ಮತಮರಿ ಗ್ರಾ.ಪಂ.ಗೆ ಸೇರಿದ ಮುರರಾಯನಹಳ್ಳಿ ಗ್ರಾಮದ ಮೂಲಕ ನಿತ್ಯ ನೂರಾರು ಭಾರೀ ವಾಹನಗಳು ಸಂಚರಿಸುತ್ತಿವೆ. ಸೀಮಾಂಧ್ರದವರೆ ಈ ರಸ್ತೆಯನ್ನು ನಿರ್ಮಾಣ ಮಾಡಿದ್ದು, ಗ್ರಾಮದ ಅಪಘಾತವಾಗುವ ತಿರುವಿನಲ್ಲಿ ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿ ಮುರರಾಯನಹಳ್ಳಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಘಟನೆ ನಡೆದಿದೆ.
ತಾಲ್ಲೂಕಿನ ಗಡಿ ಗ್ರಾಮ ಮುರರಾಯನ ಹಳ್ಳಿಯಲ್ಲಿ ಅವೈಜ್ಞಾನಿಕ ರಸ್ತೆ ತಿರುವಿನಿಂದಾಗಿ ಎರಡು ಬಾರಿ ಗ್ರಾಮದಲ್ಲಿ ಗ್ಯಾಸ್ ಟ್ಯಾಂಕರ್‍ಗಳು ಉರುಳಿ ಬಿದ್ದಿವೆ. ಹಾಗಾಗಿ ಊರಿನ ಜನರೆಲ್ಲಾ ಗ್ರಾಮವನ್ನು ತೊರೆದು ಭಯಭೀತರಾಗಿ ಯಾವ ಸಮಯದಲ್ಲಿ ಏನು ಅನಾಹುತ ಸಂಭವಿಸುವುದೋ ಎಂಬ ಆತಂಕದಲ್ಲಿ ಬದುಕುತ್ತಿದ್ದೇವೆ. ಆದರೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ, ಸರ್ವೇ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ತಿರುವಿನಲ್ಲಿ ಗ್ರಾಮದ ರಾಜಕಾಲುವೆಯ ಮೂಲಕ ಹಾದು ಹೋಗುವ ಚರಂಡಿ ನೀರು ಶೇಖರಣೆಯಾಗಿ ಗಬ್ಬುವಾಸನೆ ಬೀರುತ್ತಿದೆ. ಗ್ರಾಮದ ದಲಿತ ಕೇರಿಗೆ ಹಾಗೂ ಸರ್ಕಾರಿ ಶಾಲೆಗೆ ಚರಂಡಿ ನೀರು ಹರಿದು ಕೇರಿಯ ಜನರು ಹಾಗೂ ಶಾಲಾ ಮಕ್ಕಳು ಈ ವಾಸನೆಯಿಂದ ಹೈರಾಣಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ಈ ಸಂದರ್ಭದಲ್ಲಿ ಗ್ರಾಮದ ತಮ್ಮಣ್ಣ ಮಾತನಾಡಿ, ಮೊದಲಿಗೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಮಾಡಿದ್ದು, ಈ ರಸ್ತೆಯ ಪಕ್ಕದಲ್ಲಿಯೇ ರಾಜಕಾಲುವೆಯಿಂದ ನೀರು ಸರಾಗವಾಗಿ ಹರಿಯದೇ ತಿರುವಿನಲ್ಲೇ ನಿಂತು ಅಪಘಾತಗಳಿಗೆ ಕಾರಣವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಗ್ರಾಮಸ್ಥರಿಗೆ ಬೆಂಬಲ ವ್ಯಕ್ತಪಡಿಸಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂಶಶಿಕಿರಣ್, ದಲಿತ ಮುಖಂಡ ನಲಿಗಾನಹಳ್ಳಿ ಮಂಜುನಾಥ್ ಮಾತನಾಡಿ, ೨ ಬಾರಿ ಅಪಘಾತವಾದಾಗ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನ ವಂಶಿಕೃಷ್ಣ ಸೇರಿದಂತೆ ಇತರರು ಭೇಟಿ ನೀಡಿ ಹೋಗಿದ್ದು ಬಿಟ್ಟರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮಕ್ಕೆ ಅಪಾಯವಾಗುತ್ತಿದೆ ಎಂಬುದನ್ನು ತಿಳಿದಿದ್ದರೂ ಸಹ ತಾಲ್ಲೂಕು ಆಡಳಿತ ಮೌನವಾಗಿದೆ. ಇನ್ನೊಂದು ವಾರದಲ್ಲಿ ಈ ಸಮಸ್ಯೆಗೆ ಪರಿಹಾರ ನೀಡದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನರಸಿಂಹಮೂರ್ತಿ, ಲಕ್ಷ್ಮಮ್ಮ, ನಂಜಮ್ಮ, ಚಿಕ್ಕಣ್ಣ, ಸುಬ್ರಹ್ಮಣಿ, ಲಕ್ಷ್ಮಾನಾಯ್ಕ, ರಾಮಾಂಜಿನಪ್ಪ, ಇಮಾಮ್ ಸಾಬ್, ನಂಜುಂಡಪ್ಪ, ಹನುಮಂತರಾಯ ಮತ್ತಿತರರು ಉಪಸ್ಥಿತರಿದ್ದರು.