ಅವೈಜ್ಞಾನಿಕ ಪೈಪ್‍ಲೈನ್ ಕಾಮಗಾರಿಗೆ ಆಕ್ರೋಶ

ತಿ.ನರಸೀಪುರ.ನ.12: ತಿ.ನರಸೀಪುರ ಪಟ್ಟಣದ ಜನತೆಗೆ ನಿರಂತರವಾಗಿ (24/7) ಕುಡಿಯುವ ನೀರು ಸರಬರಾಜು ಮಾಡಲು ಪುರಾತನ ಕಪಿಲಾ ಸೇತುವೆ ಮೇಲೆ ಪೈಪ್‍ಗಳನ್ನು ಅಳವಡಿಸುವ ಮೂಲಕ ಒಳಚರಂಡಿ ಹಾಗು ಕುಡಿಯುವ ನೀರು ಸರಬರಾಜು ಮಂಡಳಿ ಅವೈಜ್ಞಾನಿಕ ಕಾಮಗಾರಿಗೆ ಮುಂದಾಗಿದೆ ಎಂದು ನಾಗರೀಕ ಸೇವಾ ವೇದಿಕೆ ಆರೋಪಿಸಿದೆ.
ನಾಗರೀಕ ಸೇವಾ ವೇದಿಕೆಯ ಅಧ್ಯಕ್ಷ ಹೆಚ್.ಆರೀಫ್ ಹಾಗು ಗೌರವಾಧ್ಯಕ್ಷ ಪಿ.ಪುಟ್ಟರಾಜು ನೇತೃತ್ವದಲ್ಲಿ ಸೇವಾ ವೇದಿಕೆಯ ಮುಖಂಡರು ಸೇತುವೆ ಮೇಲೆ ಪೈಪ್‍ಗಳನ್ನು ಅಳವಡಿಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.
ಈ ವೇಳೆ ಮಾತನಾಡಿದ ವೇದಿಕೆಯ ಕಾರ್ಯದರ್ಶಿ ಕರೋಹಟ್ಟಿ ಪ್ರಭುಸ್ವಾಮಿ ಪಟ್ಟಣದ ಎಲ್ಲ ಬಡಾವಣೆಗೆ ನಿರಂತರವಾಗಿ ಕಾವೇರಿ ನೀರು ಸರಬರಾಜು ಮಾಡಲು 2017 ರಲ್ಲಿ ಸರ್ಕಾರ 75 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು ಕಾಮಗಾರಿ ಸಹ ಆರಂಭಗೊಂಡು ಒಂದು ಹಂತಕ್ಕೆ ಬಂದು ತಲುಪಿದೆ.ಕಾವೇರಿ ನದಿಯಿಂದ ಪಟ್ಟಣಕ್ಕೆ ನೀರು ಪೂರೈಸುವ ಸಲುವಾಗಿ ಇಂಜಿನಿಯರ್ ಗಳು ಅತಿ ಉಪಯುಕ್ತವಾದ ಪುರಾತನ ಕಾಲದ ಸೇತುವೆ ಮೇಲೆ ಪೈಪ್ ಲೈನ್ ಮಾಡಲು ಹೊರಟಿದ್ದಾರೆ.ಇದು ಅವೈಜ್ಞಾನಿಕ ಕಾಮಗಾರಿಯಾಗಿದೆ.
ಮೈಸೂರು ಮಹಾರಾಜರು 1934 ರಲ್ಲಿ ತಮ್ಮ ತಾಯಿ ವಾಣಿ ವಿಲಾಸ್ ಸಾನಿಧ್ಯ ರ ನೆನಪಿಗಾಗಿ ನಿರ್ಮಿಸಿದ ಸೇತುವೆ ಇದಾಗಿದೆ.ಅಲ್ಲದೇ ಚಾಮರಾಜನಗರ, ತಮಿಳು ನಾಡು,ಮಹದೇಶ್ವರ ಬೆಟ್ಟ ದಂತಹ ರಾಜ್ಯ, ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಮಹಾರಾಜರು ಕಾವೇರಿ ಮತ್ತು ಕಪಿಲಾ ಸೇತುವೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದರು.ಪಾರಂಪರಿಕ ಸೇತುವೆ ಯಾಗಿರುವ ಕಪಿಲಾ ಸೇತುವೆ 100 ವರ್ಷಗಳಾದರೂ ಗಟ್ಟಿ ಮುಟ್ಟಾಗಿ ಇಂದಿಗೂ ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿದೆ.ಇಂತಹ ಇತಿಹಾಸವುಳ್ಳ ಈ ಸೇತುವೆ ಮೇಲೆ ಕುಡಿಯುವ ನೀರು ಸರಬರಾಜು ಮಾಡುವ ಇಲಾಖೆಯವರು ಪೈಪ್ ಗಳನ್ನು ಹಾಕುವ ಮೂಲಕ ಅವೈಜ್ಞಾನಿಕ ಕಾಮಗಾರಿಗೆ ಮುಂದಾಗಿರುವುದು ಖಂಡನೀಯವಾಗಿದ್ದು ಜನೋಪಯೋಗವಲ್ಲದ ಕಾಮಗಾರಿ ಮುಂದುವರೆದರೆ ಸಾರ್ವಜನಿಕರ ಸಹಕಾರದೊಂದಿಗೆ ಉಗ್ರ ಪ್ರತಿ ಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಮಗಾರಿಯ ಬಗ್ಗೆ ಲೋಕೋಪಯೋಗಿ ಇಲಾಖೆಯರನ್ನು ಪ್ರಶ್ನಿಸಿದರೆ ನಾವು ಒಪ್ಪಿಗೆ ಕೊಟ್ಟಿಲ್ಲ ಎನ್ನುತ್ತಾರೆ.ಆದರೆ ಕಾಮಗಾರಿ ಮಾತ್ರ ಮುಂದುವರೆದಿದೆ.ಕುಡಿಯುವ ನೀರು ಕೊಡುವ ಉದ್ದೇಶ ಸರಿ ಇದೆ ಯಾದರೂ ಇದಕ್ಕಾಗಿ ಪ್ರತ್ಯೇಕವಾಗಿ ಎಸ್ಟಿಮೇಟ್ ಮಾಡಿ ಪಿಲ್ಲರ್ ಹಾಕಿ ಪೈಪ್ ಲೈನ್ ಮಾಡಬೇಕು.ಅದನ್ನು ಬಿಟ್ಟು ರಾಜರ ಕಾಲದ ಸೇತುವೆ ಮೇಲೆಯೇ ಪೈಪ್ ಲೈನ್ ಮಾಡಲು ಹೊರಟಿರುವುದು ಅವೈಜ್ಞಾನಿಕವಾಗಿದ್ದು ಕೂಡಲೇ ಕಾಮಗಾರಿ ನಿಲ್ಲಿಸಿ ಪ್ರತ್ಯೇಕವಾದ ಪೈಪ್ ಲೈನ್ ಅಳವಡಿಸಬೇಕೆಂದು ಪ್ರಭು ಸ್ವಾಮಿ ಒತ್ತಾಯಿಸಿದರು.
ಅಗೆದಿರುವ ಗುಂಡಿ ಸರಿಪಡಿಸಿ
ಪಟ್ಟಣಕ್ಕೆ ಕುಡಿಯುವ ನೀರು ಕೊಡಲು ಮೀಟರ್ ಅಳವಡಿಸಲು ಪಟ್ಟಣದಾದ್ಯಂತ ಪ್ರತಿ ಮನೆ ಹಾಗು ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದೆ.ಎಲ್ಲೆಂದರಲ್ಲಿ ಗುಂಡಿಗಳಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗಿದೆ.ಗುತ್ತಿಗೆ ಪಡೆದಿರುವವರು ಅವರ ಎಸ್ಟಿಮೇಟ್ ಪ್ರಕಾರವೇ ಕಟಿಂಗ್ ಮಾಡಿರುವ ರಸ್ತೆಯನ್ನು ಸರಿಪಡಿಸಬೇಕು.ಆದರೆ ಈ ವರೆಗೂ ರಸ್ತೆಯ ಗುಂಡಿಗಳನ್ನು ಮಚ್ಚದೆ ತೊಂದರೆ ಎದುರಾಗಿದೆಯಾದ್ದರಿಂದ ಕೂಡಲೇ ರಸ್ತೆ ಹಾಗು ಮನೆಯ ಮುಂದೆ ತೆಗೆದಿರುವ ಗುಂಡಿಗಳನ್ನು ಮುಚ್ಚುವಂತೆ ಸಮಿತಿಯ ಗೌರವಾಧ್ಯಕ್ಷ ಪಿ.ಪುಟ್ಟರಾಜು ಒತ್ತಾಯಿಸಿದರು.
ತಿ.ನರಸೀಪುರ ಬಂದ್:ಎಚ್ಚರಿಕೆ
ಸಮಿತಿಯ ಅಧ್ಯಕ್ಷ ಹೆಚ್.ಆರೀಫ್ ಮಾತನಾಡಿ 100 ವರ್ಷಗಳ ಹಳೆಯದಾದ ಸೇತುವೆಯ ನಿರ್ವಹಣೆ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.ಮಳೆಗಾಲದಲ್ಲಿ ಸೇತುವೆ ಮೇಲೆ ನೀರು ನಿಂತು ಶಿಥಿಲವಾಗುವ ಸಾಧ್ಯತೆ ಇದೆ.ನೀರು ಸರಾಗಿ ಹರಿದು ಹೋಗಲು ದಾರಿ ಮಾಡಲಾಗಿದೆಯಾದರೂ ಅದರ ಸಮರ್ಪಕ ನಿರ್ವಹಣೆ ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ.ಅಲ್ಲದೇ ಈಗ ಇದೇ ಸೇತುವೆ ಮೇಲೆ ಕುಡಿವ ನೀರು ಸರಬರಾಜಿಗೆ ಪೈಪ್ ಲೈನ್ ಮಾಡಲು ಮುಂದಾಗಿರುವುದು ಅವಿವೇಕತನವಾಗಿದ್ದು ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿ ಪೈಪ್ ಲೈನ್ ಕಾಮಗಾರಿಯನ್ನು ಪ್ರತ್ಯೇಕ ಸ್ಥಳದಲ್ಲಿ ಮಾಡದಿದ್ದರೆ ತಿ.ನರಸೀಪುರ ಬಂದ್ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.