ಅವೈಜ್ಞಾನಿಕ ಜನತಾ ಕಾಲೋನಿಗೆ ನುಗ್ಗಿದ ಮಳೆ ನೀರು: ಆಕ್ರೋಶ

ಗುಬ್ಬಿ, ಆ. ೩- ಅವೈಜ್ಞಾನಿಕವಾಗಿ ನಿರ್ಮಾಣವಾದ ಜನತಾ ಕಾಲೋನಿ ಮನೆಗಳು ಕೆಲ ದಿನದಿಂದ ಬಿದ್ದ ಮಳೆಗೆ ಸಂಪೂರ್ಣ ಜಖಂಗೊಂಡಿವೆ. ಕೆಲ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಕಳೆದ ಬಾರಿ ಕೂಡಾ ಹೀಗೆ ನಡೆದು ಪರಿಹಾರ ಕೊಡುವ ಭರವಸೆ ನೀಡಿದ ಅಧಿಕಾರಿಗಳು ಇತ್ತ ಕಡೆ ಸುಳಿದಿಲ್ಲ. ಈ ಬಗ್ಗೆ ಸ್ಥಳ ಮಹಜರು ಮಾಡಲು ಬಂದ ಕಂದಾಯ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡ ನಿವಾಸಿಗಳ ಪರ ನಿಂತ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಕೂಡಲೇ ಅಗತ್ಯ ಕ್ರಮಕ್ಕೆ ಆಗ್ರಹಿಸಿದರು.
ಈ ಹಿಂದೆ ಬೇಕಾಬಿಟ್ಟಿ ನಿರ್ಮಾಣವಾದ ಜನತಾ ಮನೆಗಳು ಅವೈಜ್ಞಾನಿಕವಾಗಿದೆ. ಜತೆಗೆ ಅಗತ್ಯ ಸಿಸಿ ರಸ್ತೆ, ಬಾಕ್ಸ್ ಚರಂಡಿ ಇಲ್ಲದ ಕಾರಣ ಮಳೆ ನೀರು ನೇರ ಮನೆಗೆ ನುಗ್ಗುತ್ತಿದೆ. ಒಂದು ವಾರದಿಂದ ಆಗಿರುವ ಅನಾಹುತ ತಿಳಿದು ಅಧಿಕಾರಿಗಳು ಜಾಣ ಮೌನ ವಹಿಸಿರುವುದು ಸರಿಯಲ್ಲ. ಕೂಡಲೇ ಇಂತಹ ಸ್ಥಳಗಳಿಗೆ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳಬೇಕು. ಸರ್ಕಾರದ ಗಮನಕ್ಕೆ ತಂದು ನೆರೆ ಪರಿಹಾರ ನೀಡಬೇಕು. ಕೂಲಿ ಮಾಡುವ ಈ ಕಾಲೋನಿ ಮನೆಗಳ ದುರಸ್ಥಿಗೆ ಅನುಕೂಲ ಮಾಡಿಕೊಟ್ಟು ಕೂಡಲೇ ಪರಿಹಾರ ಧನ ನೀಡಿ ಸಹಕಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಕಾಂಕ್ರೀಟ್ ರಸ್ತೆ ಚರಂಡಿ ನಿರ್ಮಾಣ ಕಾರ್ಯಕ್ಕೆ ಗ್ರಾಮ ಪಂಚಾಯ್ತಿಗೆ ಮನವಿ ನೀಡಬೇಕು. ಮನೆಗಳ ದುರಸ್ಥಿಗೆ ಪರಿಹಾರ ಒದಗಿಸುವ ಕೆಲಸ ಮಾಡುವ ಭರವಸೆಯನ್ನು ಕಂದಾಯ ನಿರೀಕ್ಷಕ ರಮೇಶ್ ನೀಡಿದರು.