ಕೋಲಾರ,ಜೂ,೨೪-ಕುಣಿಯಲಾರದವಳು ನೆಲ ಡೊಂಕು ಎಂಬಂತೆ ಕಾಂಗ್ರೇಸ್ ಪಕ್ಷವು ಚುನಾವಣೆಯ ಪ್ರಚಾರದಲ್ಲಿ ಜನತೆಗೆ ಅವೈಜ್ಞಾನಿಕವಾದ ಗ್ಯಾರೆಂಟಿಗಳನ್ನು ನೀಡಿ ಈಗಾ ಅನುಷ್ಠನಕ್ಕೆ ತರಲಾಗದೆ ಕರಾರುಗಳ ಮೂಲಕ ನುಣಿಚಿಕೊಳ್ಳಲು ಪ್ರಯತ್ನಿಸುತ್ತಾ ಎಲ್ಲದಕ್ಕೂ ಕೇಂದ್ರ ಸರ್ಕಾರದ ಮೇಲೆ ಅರೋಪಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವ್ಯಂಗವಾಡಿದರು.
ನಗರದ ಒಳ ಕ್ರೀಡಾಂಗಣದ ತಮ್ಮ ಕಛೇರಿಯಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಕಾಂಗ್ರೇಸ್ ಪಕ್ಷದವರಿಗೆ ತಾವು ಅಧಿಕಾರಕ್ಕೆ ಬರುವ ನಿರೀಕ್ಷೆಯೇ ಇರಲಿಲ್ಲ. ಸಮೀಕ್ಷೆಯ ವರದಿಗಳು ಸಹ ಕಾಂಗ್ರೇಸ್ ಪಕ್ಷದ ಪರ ಇರಲಿಲ್ಲ. ಹಾಗಾಗಿ ಹೇಗಾದರೂ ಮಾಡಿ ಚುನಾವಣೆಯಲ್ಲಿ ಮತವನ್ನು ಸೆಳೆಯಲು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮನೆ ಯಾಜಮಾನಿಗೆ ೨ ಸಾವಿರ ರೂ, ಪ್ರತಿಯೊಬ್ಬರಿಗೆ ೧೦ ಕೆ.ಜಿ. ಅಕ್ಕಿ, ಯುವಕರನ್ನು ಸೆಳೆಯಲು ಪದವೀದರ ನಿರುದ್ಯೋಗಿಗಳಿಗೆ ೩ ಸಾವಿರ ರೂ, ಡಿಪ್ಲೋಮು ಮಾಡಿದವರಿಗೆ ೧೫೦೦ ರೂ ,ಪ್ರತಿ ಮನೆಗೆ ೨೦೦ ಯೂನಿಟ್ ವಿದ್ಯುತ್ ಉಚಿತ ಎಂದು ಘೋಷಿಸುವ ಮೂಲಕ ಚುನಾವಣೆಯಲ್ಲಿ ಮತಗಳನ್ನು ದೋಚಿದರು ಎಂದರು.
ಸಾರ್ವಜನಿಕ ಮತದಾರರು ಸಹ ಇಷ್ಟು ವರ್ಷಗಳಿಂದ ಬಿಜೆಪಿ ಸರ್ಕಾರವು ನೀಡಿದ್ದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಮರೆತು ಕಾಂಗ್ರೇಸ್ ಪಕ್ಷದ ಗ್ಯಾರೆಂಟಿಗಳ ಬಲೆಗೆ ಬಿದ್ದು ಮತಗಳನ್ನು ಚಲಾಯಿಸಿ ರಾಜ್ಯದಲ್ಲಿ ೧೩೫ ಸ್ಥಾನಗಳನ್ನು ತಂದು ಕೊಟ್ಟರು. ಅದರೆ ಕಾಂಗ್ರೇಸ್ ಪಕ್ಷದವರಿಗೆ ಗ್ಯಾರೆಂಟಿ ಯೋಜನೆಗಳ ವೆಚ್ಚಗಳ ಲೆಕ್ಕಚಾರ ಹಾಕಿದರೆ ರಾಜ್ಯದ ಖಜಾನೆ ಖಾಲಿಯಾಗಲಿದೆ ಎಂಬುವುದು ಅರಿತು ಈಗಾ ಗ್ಯಾರೆಂಟಿಗಳಿಗೆ ಇಲ್ಲ ಸಲ್ಲದ ಕರಾರುಗಳನ್ನು ಹಾಕುವ ಮೂಲಕ ಜನರನ್ನು ವಂಚಿಸಲು ಮುಂದಾಗಿದೆ ಗ್ಯಾರೆಂಟಿಗಳ ಕರಾರುಗಳನ್ನು ವಿವರಿಸುತ್ತಾ ಈ ಕರಾರುಗಳು ಚುನಾವಣೆ ಸಂದರ್ಭದಲ್ಲಿಯೇ ಪ್ರಕಟಿಸಿದ್ದರೆ ಕಾಂಗ್ರೇಸ್ ಪಕ್ಷವು ರಾಜ್ಯದಲ್ಲಿ ಖಂಡಿತ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಹೇಳಿದರು,
ನಿರುದ್ಯೋಗ ಪದವೀಧರರಿಗೆ ೩ ಸಾವಿರ ರೂ , ಡಿಪ್ಲೋಮೋ ಮಾಡಿದವರಿಗೆ ಒಂದೂವರೆ ಸಾವಿರ ಮಾಸಿಕ ನಿರುದ್ಯೋಗ ಭತ್ಯೆ ನೀಡುವುದಾಗಿ ಘೋಷಿಸಿದ್ದು, ಈಗಾ ಪ್ರಸ್ತಕ ಸಾಲಿನಲ್ಲಿ ತೇರ್ಗಡೆಯಾಗಿ ೬ ತಿಂಗಳಾದರೂ ಸರ್ಕಾರಿ ಅಥವಾ ಖಾಸಗಿಯಾಗಿ ಯಾವೂದೇ ಉದ್ಯೋಗ ಸಿಗದಿದ್ದರೆ ಮಾತ್ರ ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಕರಾರುಗಳನ್ನು ವಿಧಿಸಿರುವುದು ಅವೈಜ್ಞಾನಿಕವಾಗಿದೆ ಎಂದರು.
ಬಿಜೆಪಿ ಪಕ್ಷದ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಬಿಜೆಪಿ ಮಹಿಳಾ ಘಟಕದ ಮಮತಮ್ಮ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸಿಂಗ್, ಮಂಜುನಾಥ್ ಸಿಂಗ್, ಹಾರೋಹಳ್ಳಿ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು,