ಅವಿಭಕ್ತ ಕುಟುಂಬದಿಂದ ಮಾನಸಿಕ ಸ್ವಾಸ್ಥ್ಯ: ಪಾಟೀಲ

ಶಹಾಬಾದ:ಆ.13:ಮನುಷ್ಯನ ಶಾರೀರಿಕ, ಮಾನಸಿಕ ಪೀಡೆಯನ್ನು ಮನೆಯವರು ಧೈರ್ಯದಿಂದ ಎದುರಿಸಿದಾಗಿ ಮಾನಸಿಕ ಅಸ್ವಸ್ಥತೆ ದೂರ ಮಾಡಬಹುದು, ಹಿಂದೆ ಅವಿಭಕ್ತ ಕುಟುಂಬದಿಂದ ಪರಸ್ಪರ ಸಹಕಾರ, ಮಾನಸಿಕ ಧೈರ್ಯದಿಂದ ಮಾನಸಿಕ ಅಸ್ವಸ್ಥತೆ ಕಡಿಮೆಯಾಗಿದ್ದವು ಎಂದು ಉಪನ್ಯಾಸಕಿ ಇಂದುಮತಿ ಪಾಟೀಲ ಹೇಳಿದರು.

ಅವರು ಶಹಾಬಾದ ತಾಲೂಕಿನ ಸುಕ್ಷೇತ್ರ ಮಾಲಗತ್ತಿ ಹಿರೋಡೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ “ದಿ.ಅಸೋಷಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟ (ಎಪಿಡಿ) ಸಂಸ್ಥೆ ವತಿಯಿಂದ ಅಲ್ಫಾ, ಹಣಮಂತ ಅವರು ಮೇಲುಸ್ತುವಾರಿಯಲ್ಲಿ ಆಯೋಜಿಸಿದ್ದ ಮಾನಸಿಕ ಅಸ್ವಸ್ಥರ ಮತ್ತು ಪೋಷಕರಿಗೆ ಪುನಶ್ಚೇತನ ಕುರಿತು ವಸತಿಯುತ ಶಿಬಿರ ದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತ, ಅತಿಯಾದ ಮೊಬೈಲ್ ಬಳಕೆ ಜಾಗತಿಕ ಒತ್ತಡದಿಂದ ಸಮಾಜದಲ್ಲಿ ಮಾನಸಿಕ ಸಮಸ್ಯೆ ಹೆಚ್ಚಿದೆ, ಇಂತಹ ಸಂದರ್ಭದಲ್ಲಿ ಮನೆಯವರ ಧೈರ್ಯದಿಂದ ಮಾತ್ರ ಮಾನಸಿಕ ಸಮಸ್ಯೆಗೆ ಸಂಪೂರ್ಣ ಪರಿಹಾರ ಕಂಡು ಹಿಡಿಯಬಹುದಾಗಿದೆ ಎಂದು ಹೇಳಿದರು.

ಅತಿಥಿಗಳಾದ ಎಪಿಸಿ ಶಿಬಿರ ವ್ಯವಸ್ಥಾಪಕ ಸಂತೋಷ ಅವರು ಮಾತನಾಡಿ, 1950 ರಲ್ಲಿ ಎನ್.ಎಸ್.ಹೇಮ ಅವರು ಸಂಸ್ಥೆಯನ್ನು ಸ್ಥಾಪಿಸಿ,ಮಾನಸಿಕ ಕಾಯಿಲೆಯ ಹಳ್ಳಿಗಳನ್ನು ಗುರುತಿಸಿ, ಜಿಲ್ಲೆಯ ಎಲ್ಲಾ ತಾಲೂಕುಗಳ ಮಾನಸಿಕ ಅಸ್ವಸ್ಥರು ಹಾಗೂ ಪೋಷಕರ ಮೂರು ದಿನಗಳ ಶಿಬಿರ ನಡೆಸಿ, ಮಾನಸಿಕ ಅಸ್ವಸ್ಥರ ಕುರಿತು ಪೋಷಕರಿಗೆ ತಿಳುವಳಿಕೆ ನೀಡಲಾಗುತ್ತದೆ ಎಂದು ಹೇಳಿದರು.

ಮೂರು ದಿನಗಳ ಶಿಬಿರವನ್ನು ಶ್ರೀ ಹಿರೋಡೇಶ್ವರ ದೇವಸ್ಥಾನದ ಪೂಜ್ಯರಾದ ಚನ್ನಬಸವ ಶರಣರು ಉದ್ಘಾಟಿಸಿದರು. ವೇದಿಕೆ ಮೇಲೆ ಚಿತ್ತಾಪುರದ ಜ್ಯೋತಿ ಸೇವಾ ಕೇಂದ್ರದ ಡಾ.ವಿಲೀನ್, ದೇವಸ್ಥಾನದ ಕಾರ್ಯದರ್ಶಿ ಮಲ್ಲಣ್ಣ ಅಲ್ಲೂರ, ಶಿವಶರಣಪ್ಪ ಬಿರಾಳ, ಬಾಬುರಾವ ಬಳವಂಡಗಿ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ಅಯ್ಯಪ್ಪ ನಿರೂಪಿಸಿದರು, ಶ್ರೀಶೈಲ ಸ್ವಾಗತಿಸಿದರು. ಚನ್ನವೀರಪ್ಪ ವಂದಿಸಿದರು. ಶಿಬಿರದಲ್ಲಿ ಕಲಬುರಗಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಸುಮಾರು 80 ಜನ ಮಾನಸಿಕ ಅಸ್ವಸ್ಥರು, ಪೋಷಕರು ಪಾಲ್ಗೊಂಡಿದ್ದರು.