ಅವಾಚ್ಯ ಶಬ್ದಗಳಿಂದ ನಿಂದಿಸಿದ ಅಧಿಕಾರಿಯ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹ

ಶಹಾಪುರ:ನ.9:ಸಮಗ್ರ ತನಿಖೆ ವರದಿ ಕೇಳಲು ಕರೆ ಮಾಡಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕುತ್ತಿರುವ ಕೈಗಾರಿಕಾ ವಿಸ್ತರಣಾಧೀಕಾರಿ ಶಂಕರರೆಡ್ಡಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಡಾ.ಜಿ ಪರಮೇಶ್ವರ್ ಯುವ ಸೈನ್ಯದ ಜಿಲ್ಲಾಧ್ಯಕ್ಷರಾದ ಮೌನೇಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.

ಹೇಳಿಕೆಯೊಂದನ್ನು ನೀಡಿದ ಅವರು, ಶಹಾಪುರ ತಾಲೂಕಿನ ಬೀರನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಕಾಟಮನಹಳ್ಳಿ ಗ್ರಾಮದ ಅಂಗನವಾಡಿಗೆ ಶೌಚಾಲಯ ನಿರ್ಮಾಣ ಮಾಡಿರುವುದಾಗಿ 2020-21 ಸಾಲಿನ 15 ನೇ ಹಣಕಾಸು ಯೋಜನೆಯಡಿಯಲ್ಲಿ 48179 ರೂ ಬೋಗಸ್ ಬಿಲ್ ಮಾಡಲಾಗಿದೆ ಎಂದು ಜುಲೈ 28 ರಂದು ತಾ.ಪಂ. ಕಾರ್ಯನಿರ್ವಾಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಮನವಿಯ ಆಧಾರದ ಮೇರೆಗೆ ಜಿ.ಪಂ ವತಿಯಿಂದ ಆಗಷ್ಟ 5 ರಂದು ಶಹಾಪುರದ ಕೈಗಾರಿಕಾ ವಿಸ್ತರಣಾಧಿಕಾರಿಯಾದ ಶಂಕರೆಡ್ಡಿಯವರನ್ನು ತನಿಖಾಧಿಕಾರಿಯಾಗಿ ನೇಮಿಸಿ 7 ದಿನಗಳಲ್ಲಿ ವರದಿ ಸಲ್ಲಿಸಲು ಆದೇಶಿಸಿದ್ದರು. ಆದರೆ ತನಿಖೆ ಕೈಗೊಳ್ಳದೆ ಬ್ರಷ್ಟಾಚಾರದಲ್ಲಿ ಅಮಾನತ್ತಾದ ಪಿ.ಡಿ.ಓ ಜೊತೆ ಶಾಮಿಲಾಗಿ ನಕಲಿ ದಾಖಲೆ ಸೃಷ್ಟಿಸಿ 3 ತಿಂಗಳ ನಂತರ ವರದಿ ಸಲ್ಲಿಸಿದ್ದಾರೆ. ತನಿಖಾ ವರದಿ ಕೇಳಲು ಕರೆ ಮಾಡಿದ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕುತ್ತಿದ್ದಾರೆ. ಪಾರದರ್ಶಕ ತನಿಖೆ ಮಾಡಿ ವರದಿ ಸಲ್ಲಿಸಬೇಕಾದ ಇವರು ಬ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವುದರ ಜೊತೆಗೆ ವರದಿ ಕೇಳಲು ಕರೆ ಮಾಡಿರುವ ನನಗೆ ಜೀವ ಬೆದರಿಕೆ ಹಾಕುತ್ತಿರುವ ತನಿಖಾಧಿಕಾರಿ ಶಂಕರರೆಡ್ಡಿಯವರ ವಿರುದ್ದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಾರಕಿಹೊಳಿ ಆಗ್ರಹಿಸಿದರು.