ಅವಹೇಳನಕಾರಿ ಬರಹ ಬರೆದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಮಂಗಳೂರು, ಜ.೪- ಮಂಗಳೂರಿನ ಅತ್ತಾವರ ಬಾಬುಗುಡ್ಡೆಯಲ್ಲಿ ಭಗವಾನ್ ಶ್ರೀ ಬಬ್ಬುಸ್ವಾಮಿ ಕ್ಷೇತ್ರ ಹಾಗೂ ಭಗವಾನ್ ಶ್ರೀ ದೇವರಾಜ ಕೋರ್ದಬ್ಬು ಕ್ಷೇತ್ರದ ಕಾಣಿಕೆ ಡಬ್ಬಿಯಲ್ಲಿ ಹಿಂದೂ ದೇವತೆಗಳ ಕುರಿತು ಅವಹೇಳನಕಾರಿ ಬರಹ ಬರೆದು ಕೋಮು ಭಾವನೆ ಕೆರಳಿಸುವವರ ಬಂಧನಕ್ಕೆ ಮಂಗಳೂರು ನಗರ ದಕ್ಷಿಣ ಬಿಜೆಪಿ ಎಸ್.ಸಿ ಮೋರ್ಚಾ ಆಗ್ರಹಿಸಿದೆ.
ಪರಿಶಿಷ್ಟ ಜಾತಿ ಹಾಗೂ ಮಂಡಲ ಸಮಾಜವು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆರಾಧಿಸಿಕೊಂಡು ಬಂದಿರುವ ಕ್ಷೇತ್ರವನ್ನು ಅಪವಿತ್ರಗೊಳಿಸುವ ಉದ್ದೇಶದಿಂದ ಇಂತಹ ಕೃತ್ಯ ಮಾಡಲಾಗಿದೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕೆಂದು ಎಸ್.ಸಿ ಮೋರ್ಚಾ ಅಧ್ಯಕ್ಷ ರಘುವೀರ್ ಬಾಬುಗುಡ್ಡೆ ಆಗ್ರಹಿಸಿದ್ದಾರೆ. ಈಗಾಗಲೇ ಈ ಘಟನೆಯ ಕುರಿತು ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಸಮಾಜದ ಧಾರ್ಮಿಕ ಭಾವನೆಗಳ ಚೆಲ್ಲಾಟವಾಡುವ ಕಿಡಿಗೇಡಿಗಳಿಗೆ ಕಾನೂನಿನಡಿ ಕ್ರಮ ಜರುಗಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಬರಹಗಳನ್ನೊಳಗೊಂಡ ಪತ್ರ, ನೋಟಿನ ನಕಲು ಪ್ರತಿಗಳು ನಗರದ ಮೂರು ದೈವಸ್ಥಾನಗಳ ಕಾಣಿಕೆ ಡಬ್ಬಗಳಲ್ಲಿ ಪತ್ತೆಯಾಗಿದ್ದು, ಅತ್ತಾವರ ಬಾಬುಗುಡ್ಡೆ ಶೆಟ್ಲೆ ಗ್ರಾಮದ ಶ್ರೀ ಬಬ್ಬುಸ್ವಾಮಿ ದೈವಸ್ಥಾನ, ಅದರ ಸಮೀಪದಲ್ಲಿರುವ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ ಹಾಗೂ ಕೊಟ್ಟಾರದ ಕಲ್ಲುರ್ಟಿ ದೈವಸ್ಥಾನದ ಕಾಣಿಕೆ ಡಬ್ಬಿಗಳಲ್ಲಿ ಪತ್ರ, ನೋಟಿನ ನಕಲು ಪ್ರತಿಗಳು ಕಂಡುಬಂದಿವೆ.