ಅವಳಿ ನಗರ ಅಭಿವೃದ್ಧಿಗೆ ಆಗ್ರಹ

ಹುಬ್ಬಳ್ಳಿ, ನ 6: ರಾಜ್ಯ ಸರ್ಕಾರದ ಐದು ವರ್ಷದ ಅವಧಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದರೂ ಕೂಡ ಹುಬ್ಬಳ್ಳಿ ಧಾರವಾಡ ಅಭಿವೃದ್ಧಿ ಆಗುತ್ತಿಲ್ಲ. ಅದೆಷ್ಟೋ ಬಡವರ ಯೋಜನೆಗಳು ಮಂಗಮಾಯವಾಗಿವೆ ಎಂದು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಜೈ ಭಾರತ ಜನ ಸೇವಾ ಸಂಘದ ಜಿಲ್ಲಾಧ್ಯಕ್ಷ ಐ.ಎಮ್. ತೊರಗಲ್ ಆರೋಪಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹುಬ್ಬಳ್ಳಿ ಧಾರವಾಡದಲ್ಲಿ ರಸ್ತೆ, ಗಟಾರು, ಒಳಚರಂಡಿ, ನೀರಿನ ಪೈಪ್‍ಲೈನ್ ಕಾಮಗಾರಿಗಳು ನಡೆಯುತ್ತಿವೆ. ಅವೆಲ್ಲವೂ ಕಳೆಪೆ ಮಟ್ಟದ್ದಾಗಿವೆ. ಇದರ ಬಗ್ಗೆ ಶಾಸಕರು ತಮ್ಮ ಗಮನಕ್ಕೆ ಬಂದರೂ ಸಹ ಕೈ ಕಟ್ಟಿ ಕುಳಿತಿದ್ದಾರೆ ಎಂದರು.
ಕೂಡಲೆ ಹುಬ್ಬಳ್ಳಿ ಧಾರವಾಡದಲ್ಲಿನ ಗುಂಡಿ, ರಸ್ತೆ ಕಾಮಗಾರಿ, ಚರಂಡಿ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿದರು. ಸಮಸ್ಯೆಗಳನ್ನು ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲ ಶಾಸಕರ ಮನೆ ಮುಂದೆ ಹೋರಾಟ ಮಾಡಲಾಗುತ್ತದೆಂದು ಎಚ್ಚರಿಕೆ ನೀಡಿದರು.