ಅವಳಿ ನಗರದಲ್ಲಿ ಬಿಗಿ ಭದ್ರತೆ

ಹುಬ್ಬಳ್ಳಿ, ಏ29: ಕೊರೊನಾ ಎರಡನೇ ಅಲೆ ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಧಾರವಾಡ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದು, ಲಾಕ್ ಡೌನ್ ಎರಡನೇ ದಿನವೂ ಜನ ಸಂಚಾರವಿಲ್ಲದೆ ಹುಬ್ಬಳ್ಳಿ-ಧಾರವಾಡ ಅವಳಿನಗರ ಸ್ತಬ್ಧಗೊಂಡಿತು.
ಅಗತ್ಯ ವಸ್ತುಗಳ ಖರೀದಿಗೆ ನಿಗದಿಪಡಿಸಿದ್ದ ಬೆಳಗಿನ 10 ಗಂಟೆ ಮುಗಿಯುತ್ತಿದ್ದಂತೆ ಪೆÇಲೀಸರು ಎಲ್ಲೆಡೆಯಲ್ಲೂ ಗಸ್ತು ಆರಂಭಿಸಿ ವ್ಯಾಪಾರ ಚಟುವಟಿಕೆಗಳನ್ನು ಬಂದ್ ಮಾಡಿಸಿದರು.
10 ಗಂಟೆ ನಂತರ ಪೆÇಲೀಸರು ಲಾಠಿ ಹಿಡಿದು ವೃತ್ತಗಳಲ್ಲಿ ನಿಂತುಕೊಂಡು ಪ್ರತಿಯೊಬ್ಬರನ್ನು ವಿಚಾರಿಸಿ ತಪಾಸಣೆ ಕಾರ್ಯದಲ್ಲಿ ತೊಡಗಿರುವುದು ಕಂಡು ಬಂದಿತು.
ನಿತ್ಯವೂ ಜನಜಂಗುಳಿ, ವಾಹನಗಳ ದಟ್ಟಣೆಯಿಂದ ಕೂಡಿರುತ್ತಿದ್ದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಿಂದ ಹಿಡಿದು ಬಡಾವಣೆಯ ರಸ್ತೆಗಳು, ವ್ಯಾಪಾರಿ ಮಳಿಗೆಗಳು, ಸರ್ಕಾರಿ ಕಚೇರಿಗಳು, ಮೈದಾನಗಳು, ಉದ್ಯಾನಗಳು, ಹೋಟೆಲ್, ರೆಸ್ಟೊರೆಂಟ್‍ಗಳು, ಬೀದಿಬದಿ ವ್ಯಾಪಾರ, ತರಕಾರಿ ಮಾರುಕಟ್ಟೆಗಳು, ಬಸ್ ನಿಲ್ದಾಣಗಳೆಲ್ಲವೂ ಬಿಕೋ ಎನ್ನುತ್ತಿರುವುದು ಎಲ್ಲೆಡೆ ಕಂಡು ಬಂದಿತು.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತ, ಕೇಶ್ವಾಪೂರ ವೃತ್ತ, ಧಾರವಾಡದ ಜುಬ್ಲಿ ವೃತ್ತ ಸೇರಿದಂತೆ ವಿವಿಧ ರಸ್ತೆಗಳ ತಿರುವು ಹಾಗೂ ವೃತ್ತಗಳಲ್ಲಿ ಬ್ಯಾರಿಕೇಡ್ ಹಾಕಿ ನಿಂತಿರುವ ಪೆÇಲೀಸರು ಅನಗತ್ಯವಾಗಿ ಸಂಚರಿಸುವವರಿಗೆ ಬಿಸಿ ಮುಟ್ಟಿಸುವ ಕಾರ್ಯದಲ್ಲಿ ತೊಡಗಿದ್ದರು.
ಅನಗತ್ಯ ಸಂಚರಿಸುವ ವಾಹನಗಳ ಸೀಜ್ ಗೆ ಮುಂದಾದರು.
ಆಸ್ಪತ್ರೆ ಹಾಗೂ ಇತರೆ ತುರ್ತು ಕೆಲಸಗಳಿಗೆ ತೆರಳುವವರು, ಸರ್ಕಾರಿ ನೌಕರರು ಹಾಗೂ ಸರಕು ವಾಹನಗಳಿಗೆ ಅವಕಾಶ ನೀಡಲಾಯಿತು.
ಇನ್ನೂ ಅವಳಿ ನಗರದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದ್ದರೂ ಕೆಲವೆಡೆ ಜನ ಹಾಗೂ ವಾಹನ ಸಂಚಾರ ಕಂಡು ಬಂದಿತು.