ಅವಳಿ ತಾಲ್ಲೂಕಿನಲ್ಲಿ ಲಾಕ್ ಡೌನ್ ಯಶಸ್ವಿ

ನ್ಯಾಮತಿ.ಮೇ.೨೧ : ಕೊರೊನಾ ಸೋಂಕು ಅವಳಿ ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವಳಿ ತಾಲೂಕುಗಳನ್ನು ಮೂರು ದಿನಗಳ ಕಾಲ ಲಾಕ್‌ಡೌನ್‌ಗೆ ಕರೆನೀಡಿದ್ದು ಮೊದಲ ದಿನವಾದ  ಲಾಕ್‌ಡೌನ್ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಸಿಎಂ ರಾಜಕೀಯ ಕಾಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ನ್ಯಾಮತಿ ಪಟ್ಟಣದ ಪ್ರಮುಖ ಬೀದಿಗಳನ್ನು ಪ್ರದಕ್ಷಿಣೆ ಹಾಕಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು,ನಮ್ಮ ಮನವಿಗೆ ಅವಳಿ ತಾಲೂಕಿನ ಜನತೆ ಸಕಾರಾತ್ಮಕವಾಗಿ ಸ್ಪಂದಿಸಿದ ಪರಿಣಾಮ ಸಂಪೂರ್ಣ ಲಾಕ್‌ಡೌನ್ ಆಗಲು ಸಹಕಾರಿಯಾಗಿದೆ ಎಂದರು.ನ್ಯಾಮತಿ ಪಟ್ಟಣದ ಪ್ರಮುಖ ರಸ್ತೆಗಳನ್ನು ಸೀಲ್‌ಡೌನ್ ಮಾಡಲಾಗಿದ್ದು ಚೆಕ್‌ಪೋಸ್ಟ್ಗಳಲ್ಲಿ ಟೈಟ್ ಮಾಡಿದ ಪರಿಣಾಮ ಅನಗತ್ಯವಾಗಿ ಓಡಾಡುವ ಬೈಕ್‌ಗಳಿಗೆ ಕಡಿವಾಣ ಹಾಕಿದಂತಾಗಿದೆ ಎಂದರು.ಸವಳಂಗ,ಬೆಳಗುತ್ತಿ,ಮಲ್ಲಿಗೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ತಾಲೂಕು ಆಡಳಿತದೊಂದಿಗೆ ಭೇಟಿ ನೀಡಿದ ಶಾಸಕರು ಯಾರೂ ಸಹ ಮನೆಯಿಂದ ಹೊರ ಬಾರದಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.ಹಳ್ಳಿಹಳ್ಳಿಗಳಲ್ಲೂ ಕೊರೊನಾ ರಣಕೇಕೆ ಹಾಕುತ್ತಿದ್ದು ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‌ಡೌನ್ ಮಾಡಲಾಗಿದ್ದು ಯಾರೂ ಕೂಡ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸದೇ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕಿವಿ ಮಾತು ಹೇಳಿದರು.ಪೆಟ್ರೋಲ್,ಹಾಲು,ಕೃಷಿ ಚಟುವಟಿಕೆಗಳಿಗೆ ಹೋಗಿ ಬರಲು ಮಾತ್ರ ಅವಕಾಶ ನೀಡಿದ್ದು ಇನ್ನೀತರ ಯಾವುದಕ್ಕೂ ಅವಕಾಶ ನೀಡಿಲ್ಲವಾದ್ದರಿಂದ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಾಧ್ಯಂತ ಲಾಕ್‌ಡೌನ್ ಯಶಸ್ವಿಯಾಗಿದ್ದು ಇನ್ನೇರಡು ದಿನಗಳ ಕಾಲವೂ ಸಾರ್ವಜನಿಕರು ಸಹಕಾರ ನೀಡಿ ಎಂದರು.ಕೆಮ್ಮು, ಜ್ವರ ಹಾಗೂ ಶೀತಕ್ಕೆ ಎಂದು ಕೆಲವರು ಹೈಡೋಸ್ ಮಾತ್ರೆಗಳನ್ನು ಸೇವಿಸುತ್ತಿದ್ದು ಎರಡು ಮೂರು ದಿನ ಮಾತ್ರ ಚೆನ್ನಾಗಿರುತ್ತಾರೆ ಮತ್ತೆ ಹುಷಾರಿಲ್ಲ ಎಂದು ಆಸ್ಪತ್ರೆಗೆ ಬರುತ್ತಿದ್ದಾರೆ,ಅಷ್ಟೊತ್ತಿಗೆ ಸೋಂಕು ಶ್ವಾಸಕೋಶಕ್ಕೆ ಹರಡುತ್ತಿರುವುದರಿಂದ ಅವರ ಪರಿಸ್ಥಿತಿ ಗಂಭೀರವಾಗುತ್ತಿದೆ ಆದ್ದರಿಂದ ಕೆಮ್ಮು,ಶೀತ ಹಾಗೂ ಜ್ವರ ಎಂದು ತಿಳಿದ ಕೂಡಲೆ ಸರ್ಕಾರಿ ಆಸ್ಪತ್ರೆ ಬಂದು ಕರೋನಾ ಪರೀಕ್ಷೆ ಮಾಡಿಸಿಕೊಂಡು ಮುಂದಾಗ ಬಹುದಾದ ಅನಾಹುತ ತಪ್ಪಿಸಿಕೊಳ್ಳಿ ಎಂದು ಶಾಸಕರು ಮನವಿ ಮಾಡಿದರು.ಲಸಿಕೆ ಪೂರೈಕೆ :  ಅವಳಿ ತಾಲೂಕಿಗೆ 900 ಕೋವ್ಯಾಕ್ಸಿನ್ ತರಿಸಿದ್ದು ಅವುಗಳನ್ನು ಈಗಾಗಲೇ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗಿದೆ.  ಯಾರು ಎರಡನೇ ಡೋಸ್ ಪಡೆದಿಲ್ಲವೋ ಅವರು ಯಾವುದೇ ಗೊಂದಲವಿಲ್ಲದೇ ಆಸ್ಪತ್ರೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಿ ಎಂದರು.ನ್ಯಾಮತಿ ತಹಸೀಲ್ದಾರ್ ತನುಜಾಸೌದತ್ತಿ,ಸಿಪಿಐ ದೇವರಾಜ್,ನ್ಯಾಮತಿ ತಾ.ಪಂ.ಇಒ ರಾಮಬೋವಿ,ಉಪತಹಸೀಲ್ದಾರ್ ನಾಗರಜ್,ಪಿಎಸೈ ರಮೇಶ್,ತಾ.ಪಂ. ಮಾಜಿ ಅಧ್ಯಕ್ಷ ರವಿಕುಮಾರ್,ಅಜಯರೆಡ್ಡಿ ಹಾಗೂ ಇತರರು ಇದ್ದರು.