ಅವಳಿನಗರ, ಬೆಳಗಾವಿ ಪಾಲಿಕೆ ಬಿಜೆಪಿ ವಶ


ಬೆಂಗಳೂರು, ಸೆ. ೬- ಜಿದ್ದಾಜಿದ್ದಿಯ ಹೋರಾಟಕ್ಕೆ ಸಾಕ್ಷಿಯಾಗಿದ್ದ ರಾಜ್ಯದ ಮೂರು ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಮಲ ಅರಳಿದ್ದು, ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಕೈ ಮುನ್ನಡೆ ಸಾಧಿಸಿದೆ. ಜೆಡಿಎಸ್ ತೀವ್ರ ಮುಖಭಂಗ ಅನುಭವಿಸಿದ್ದು, ಬೆಳಗಾವಿಯಲ್ಲಿ ಪ್ರಾಬಲ್ಯ ಹೊಂದಿದ್ದ ಎಂಇಎಸ್ ಸೋತು ಸುಣ್ಣವಾಗಿದೆ.
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದ ನಂತರ ನಡೆದ ಪಾಲಿಕೆ ಹಾಗೂ ಕೆಲವು ಪುರಸಭೆಗಳಿಗೆ ನಡೆದ ಚುನಾವಣೆ ಅವರ ನಾಯಕತ್ವಕ್ಕೂ ಅಗ್ನಿ ಪರೀಕ್ಷೆಯಾಗಿತ್ತು. ಮತದಾರ ಕಮಲ ಅರಳಿಸುವ ಮೂಲಕ ಬಸವರಾಜಬೊಮ್ಮಾಯಿ ನಾಯಕತ್ವಕ್ಕೆ ಸೈ ಎಂದಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ೨೫ ವರ್ಷಗಳ ನಂತರ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಇದುವರೆಗೂ ಇಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಚಿನ್ನೆಯ ಮೇಲೆ ಅಭ್ಯರ್ಥಿಗಳನ್ನು ನಿಲ್ಲಿಸದೆ ಎಂಇಎಸ್ ವಿರುದ್ಧ ಒಕ್ಕೂಟ ರಚಿಸಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದರು. ಇದೇ ಮೊದಲ ಬಾರಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಚಿನ್ನೆಯ ಮೇಲೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಬೆಳಗಾವಿ ಮಹಾನಗರದ ಮತದಾರರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಒಟ್ಟು ೫೮ ವಾರ್ಡ್‌ಗಳ ಪೈಕಿ ಬಿಜೆಪಿ ೩೬ ವಾರ್ಡ್‌ಗಳಲ್ಲಿ ಜಯಭೇರಿ ಭಾರಿಸಿ ಸ್ಪಷ್ಟ ಬಹುಮತ ಪಡೆದಿದೆ. ಅಧಿಕಾರದ ಕನಸು ಕಂಡಿದ್ದ ಕಾಂಗ್ರೆಸ್‌ಗೂ ನಿರಾಸೆಯಾಗಿದೆ. ಗಡಿ ಹಾಗೂ ಭಾಷಾ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಗೆ ಮತದಾರರು ಈ ಬಾರಿ ಕೈ ಕೊಟ್ಟಿದ್ದು, ತೀವ್ರ ಮುಖ ಭಂಗ ಅನುಭವಿಸಿದೆ. ಹಾಗೆಯೇ ಜೆಡಿಎಸ್ ಸಹ ಭಾರಿ ಸೋಲು ಕಂಡಿದೆ. ಇಲ್ಲಿ ಜೆಡಿಎಸ್‌ನ ಒಬ್ಬರೂ ಗೆದ್ದಿಲ್ಲ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲೂ ಬಿಜೆಪಿ ಸ್ಪಷ್ಟ ಬಹುಮತಗಳಿಸಿ ಅಧಿಕಾರ ಹಿಡಿಯವತ್ತ ದಾಪುಗಾಲು ಹಾಕಿದೆ. ಹುಬ್ಬಳ್ಳಿ-ಧಾರವಾಡದ ೮೨ ವಾರ್ಡ್‌ಗಳ ಪೈಕಿ ಬಿಜೆಪಿ ೩೯ ವಾರ್ಡ್‌ಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ೩೩ ವಾರ್ಡ್‌ಗಳಲ್ಲಿ, ಜೆಡಿಎಸ್ ೧ ಮತ್ತು ಪಕ್ಷೇತರರು ೯ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿಗೆ ಬಹುಮತಕ್ಕೆ ೩ ಸ್ಥಾನಗಳಷ್ಟೇ ಕೊರತೆ ಇದ್ದು, ಪಕ್ಷೇತರರ ನೆರವಿನಿಂದ ಬಿಜೆಪಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಲೆಕ್ಕಚಾರ ನಡೆಸಿದೆ.
ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರ ಗದ್ದುಗೆ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹಣಾಹಣಿಯೇ ನಡೆದಿದ್ದು, ಕಲಬುರಗಿಯ ಒಟ್ಟು ೫೫ ವಾರ್ಡ್‌ಗಳ ಪೈಕಿ ಕಾಂಗ್ರೆಸ್ ೨೪ ಮತ್ತು ಬಿಜೆಪಿ ೨೦ ವಾರ್ಡ್‌ಗಳಲ್ಲಿ ಜಯಗಳಿಸಿದ್ದು, ಇನ್ನು ಕೆಲ ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಬೇಕಿದೆ.
ದೊಡ್ಡಬಳ್ಳಾಪುರ ನಗರಸಭೆಯಲ್ಲೂ ಬಿಜೆಪಿ ಅಧಿಕಾರ ಹಿಡಿಯಲಿದೆ. ಇಲ್ಲಿ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದ್ದರೂ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಬಹುಮತಕ್ಕೆ ನಾಲ್ಕು ಸ್ಥಾನಗಳ ಕೊರತೆ ಇದೆ. ಪಕ್ಷೇತರ ನೆರವಿನಿಂದ ಬಿಜೆಪಿ ಇಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆಗಳಿವೆ.
ತರೀಕೆರೆ ಪುರಸಭೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಗ್ರೆಸ್ ಅಧಿಕಾರ ಹಿಡಿದಿದೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪಕ್ಷಗಳ ಬಲಾಬಲ
ಒಟ್ಟು ಸ್ಥಾನಗಳು ೫೮

೧. ಬಿಜೆಪಿ-೩೬
೨. ಕಾಂಗ್ರೆಸ್-೯
೩, ಎಂಇಎಸ್+ ಇತರರು-೧೩
೪. ಜೆಡಿಎಸ್-೦

ಹುಬ್ಬಳ್ಳಿ-ಧಾರವಾಡ
ಒಟ್ಟು ಸ್ಥಾನಗಳು ೮೨

೧. ಬಿಜೆಪಿ-೩೯
೨. ಕಾಂಗ್ರೆಸ್-೩೩
೩. ಜೆಡಿಎಸ್-೧
ಪಕ್ಷೇತರರು-೯
ಕಲಬುರಗಿ
ಒಟ್ಟು ಸ್ಥಾನಗಳು ೫೫
೧. ಬಿಜೆಪಿ ೨೪
೨.ಕಾಂಗ್ರೆಸ್-೨೫
೪. ಜೆಡಿಎಸ್-೩
೫. ಪಕ್ಷೇತರರು-೧