ಅವರೆಕಾಳು ನಿಪ್ಪಟ್ಟು

ಬೇಕಾಗುವ ಪದಾರ್ಥಗಳು
ಎಳೆ ಅವರೆಕಾಳು 1 ಲೋಟ
ಅಕ್ಕಿಹಿಟ್ಟು 1 ಪಾವು
ಚಿರೋಟಿ ರವೆ 1 ಚಮಚ
ಮೈದಾಹಿಟ್ಟು 1 ಚಮಚ
ಹುರಿದ ಎಳ್ಳು 1 ಚಮಚ
ಚಿಟಿಕೆ ಜೀರಿಗೆ
ಕಾರದ ಪುಡಿ
ಒಣಕೊಬ್ಬರಿ ಅರ್ಧ ಲೋಟ
ಮತ್ತು ಕರಿಯಲು ಖಾದ್ಯತೈಲ
ತಯಾರಿಸುವ ವಿಧಾನ :
ಎಳೆ ಅವರೆಕಾಳುಗಳನ್ನು ಒಂದು ಲೋಟದಷ್ಟು ನೀರಿನಲ್ಲಿ ಬೇಯಿಸಿಟ್ಟುಕೊಳ್ಳಿ. ನಂತರ ಅಕ್ಕಿಹಿಟ್ಟು ಮತ್ತು ಚಿರೋಟಿ ರವೆಯನ್ನು ಮಿಲಾಯಿಸಿ ಅದಕ್ಕೆ ಒಂದೇ ಒಂದು ಚಮಚದಷ್ಟು ಕಾದ ಎಣ್ಣೆ ಸುರಿದು ಹದವಾಗಿ ಕೈಯಾಡಿಸಿಕೊಳ್ಳಿ. ಅದಕ್ಕೆ ಬೇಯಿಸಿದ ಅವರೆಕಾಳು, ಮೈದಾಹಿಟ್ಟು, ಜೀರಿಗೆ, ಕಾರದ ಪುಡಿ, ಎಳ್ಳು ಮತ್ತು ಒಣಕೊಬ್ಬರಿ ಮತ್ತು ಉಪ್ಪನ್ನು ಬೆರೆಸಿ ಒಂದಿಷ್ಟು ನೀರಿನೊಂದಿಗೆ ಚೆನ್ನಾಗಿ ಕಲಿಸಿಟ್ಟುಕೊಳ್ಳಿ. ಇಷ್ಟು ಮಾಡಿಟ್ಟುಕೊಂಡರೆ ಕರಿಯಲು ಅವರೆಕಾಳು ನಿಪ್ಪಟ್ಟಿನ ಹಿಟ್ಟು ರೆಡಿಯಾದಂತೆ.
ಇಷ್ಟಾದ ನಂತರ ಒಂದು ಬಾಣಲೆಯಲ್ಲಿ ಕರಿಯಲು ಬೇಕಾಗುವಷ್ಟು ಖಾದ್ಯತೈಲವನ್ನು ಸುರುವಿ ಚೆನ್ನಾಗಿ ಕಾಯಿಸಿ. ಪ್ಲಾಸ್ಟಿಕ್ ಹಾಳೆಯ ಮೇಲೋ ಅಥವಾ ಬಾಳೆಎಲೆಯ ಮೇಲೋ ಕಲಿಸಿಟ್ಟುಕೊಂಡ ಹಿಟ್ಟನ್ನು ಕೈಯಿಂದ ತಟ್ಟಿ ಅದನ್ನು ಕಾದ ತೈಲದಲ್ಲಿ ತೇಲಿಬಿಡಿ. ತೂತುತೂತಿನ ಜಾಲರಿಯಿಂದ ಎಣ್ಣೆಯನ್ನು ತೇಲಿಬಿಟ್ಟ ಹಿಟ್ಟಿನ ಮೇಲೆ ಹರಡುತ್ತಿರಿ. ತಟ್ಟಿದ ಹಿಟ್ಟು ಕಂದು ಬಣ್ಣಕ್ಕೆ ಬರುತ್ತಿದ್ದಂತೆ ಬಾಣಲೆಯಿಂದ ತೆಗೆದುಬಿಡಿ. ಅಷ್ಟೇ, ಗರಮಾಗರಂ ಅವರೆಕಾಳು ನಿಪ್ಪಟ್ಟು ರೆಡಿ.