ಅವರೆಕಾಳು ಆಂಬೋಡೆ

ಆರೋಗ್ಯಕರವಾದ ಅವರೆಕಾಳು ಹಾಗೂ ರುಚಿಕರವಾದ ಮಸಾಲೆಗಳೊಂದಿಗೆ ಅದ್ಭುತ ರುಚಿಯನ್ನು ನೀಡುತ್ತದೆ. ಬಹಳ ಸುಲಭ ಹಾಗೂ ಸರಳವಾದ ವಿಧಾನದ ಮೂಲಕ ಈ ತಿಂಡಿಯನ್ನು ಮನೆಯಲ್ಲಿಯೇ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು:
1 ಕಪ್‌ ಅವರೆಕಾಳು
1 ಇಂಚು ಕತ್ತರಿಸಿದ ಶುಂಠಿ
5 ಹಸಿಮೆಣಸಿನಕಾಯಿ
1/2 ಕಪ್‌ ತುರಿದ ತೆಂಗಿನಕಾಯಿ
1 ಮುಷ್ಟಿಯಷ್ಟು ಕರಿಬೇವು
1 ಮುಷ್ಟಿಯಷ್ಟು ಕೊತ್ತಂಬರಿ ಸೊಪ್ಪು
1 ಕತ್ತರಿಸಿದ ಈರುಳ್ಳಿ
3 ಚಮಚ ಅಕ್ಕಿ ಹಿಟ್ಟು
ಅಗತ್ಯಕ್ಕೆ ತಕ್ಕಷ್ಟು ಉಪ್ಪು
ಸಂಸ್ಕರಿಸಿದ ಎಣ್ಣೆ
ತಯಾರಿಸುವ ವಿಧಾನ:
ಮಿಕ್ಸರ್ ಪಾತ್ರೆಗೆ ಸ್ವಲ್ಪ ಅವರೆಕಾಳು, ಹಸಿಮೆಣಸಿನ ಕಾಯಿ ಮತ್ತು ಶುಂಠಿಯನ್ನು ಸೇರಿಸಿ, ಒರಟಾಗಿ ರುಬ್ಬಿಕೊಳ್ಳಿ. ಇದಾದ ನಂತರ ಒಂದು ಪಾತ್ರೆಗೆ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ. ನಂತರ ಅದೇ ಮಿಶ್ರಣಕ್ಕೆ ಉಳಿದ ಅವರೆಕಾಳು, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಹೆಚ್ಚಿಕೊಂಡ ಈರುಳ್ಳಿ, ಅಕ್ಕಿ ಹಿಟ್ಟು, ಉಪ್ಪು, ತಾಜಾ ತೆಂಗಿನ ತುರಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಸೇರಿಸಿ, ಬಿಸಿ ಮಾಡಿ. ಹಿಟ್ಟಿನ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ, ಸಿದ್ಧಪಡಿಸಿಕೊಂಡ ಮಿಶ್ರಣದ ಉಂಡೆಯನ್ನು ವಡೆಯ ಆಕಾರದಲ್ಲಿ ಎಣ್ಣೆಗೆ ಹಾಕಿ. ಎಣ್ಣೆಯಲ್ಲಿ ಬಿಟ್ಟ ವಡೆಯು ಎರಡು ಭಾಗದಲ್ಲೂ ಕೆಂಪು ಬಣ್ಣಕ್ಕೆ ಬರುವ ಹಾಗೆ ಕರಿಯಿರಿ. ನಂತರ ಒಂದು ಪ್ಲೇಟ್ ಗೆ ವರ್ಗಾಯಿಸಿ. ಈಗ ಬಿಸಿ-ಬಿಸಿಯಾದ ಅಂಬೋಡೆ ಒಂದು ಕಪ್ ಟೀ/ಕಾಫಿಯೊಂದಿಗೆ ಅಥವಾ ಸಾಸ್ ನೊಂದಿಗೆ ಸವಿಯಲು ಸಿದ್ಧ.