“ಅವರು ಅನಾಥರಲ್ಲ ಅವರೆಲ್ಲರೂ ನನ್ನ ಮಕ್ಕಳು”ನಿಜಪ್ಪ ಹಿರೇಮನಿ ಎಂಬ ಅನಾಥ. ನಿರ್ಗತಿಕ ಮಕ್ಕಳ ಗಾಡ್ ಫಾದರ್

ಅಥಣಿ :ಜೂ.17: ಅಪ್ಪ ಅನ್ನುವ ಎರಡಕ್ಷರದಲ್ಲಿ ಇಡೀ ಮನೆಯ ಮತ್ತು ಕುಟುಂಬದ ಜವಾಬ್ದಾರಿ ಹೊತ್ತ ಎಷ್ಟೋ ಜೀವಗಳು ಹಗಲು ರಾತ್ರಿ ಎನ್ನದೇ ದುಡಿಯುವದು ತನ್ನ ಮಕ್ಕಳ ಮತ್ತು ಕುಟುಂಬದ ಹಿತಕ್ಕಾಗಿ ಆದರೆ ಅದೇ ಅಪ್ಪ ಒಬ್ಬ ಆದರ್ಶ ಪೆÇೀಷಕ ಅನ್ನಿಸಿಕೊಳ್ಳಬೇಕಾದರೆ ತನ್ನ ಮಕ್ಕಳನ್ನೂ ಸಮಾಜಕ್ಕೆ ಮಾದರಿ ಆಗುವಂತೆ ಬೆಳೆಸಬೇಕು ಅನ್ನುವದು ಪ್ರಜ್ಞಾವಂತರ ಅಭಿಪ್ರಾಯ.

ಸ್ವಂತ ಮಕ್ಕಳು ಹಠ ಮಾಡಿ ಅತ್ತಾಗಲೇ ಅಪ್ಪ ಅನ್ನಿಸಿಕೊಂಡವರು ಗದರಿಸುವದು, ಏ ನೋಡು ನಿನ್ನ ಅನ್ನುತ್ತ ಮಕ್ಕಳ ಮೈಮೇಲೆ ಏರಿ ಹೋಗುವದು, ಬುದ್ದಿ ಹೇಳುವ ಭರದಲ್ಲಿ ಕೆನ್ನೆಗೆ ಎರಡು ಏಟು ಹೊಡೆದು ಬಿಡುವದು, ಮತ್ತು ಅದೇ ಮಕ್ಕಳನ್ನ ಹೆಗಲ ಮೇಲೆ ಹೊತ್ತು ಊರು ಸುತ್ತಿ ಜಾತ್ರೆ ತೋರಿಸುವ ಅದೆಷ್ಟೋ ಅಪ್ಪಂದಿರ ನಡುವೆಯೇ ವಿಶೇಷವಾಗಿ ಸಮಾಜದ ನಿರ್ಲಕ್ಷಕ್ಕೆ ಒಳಗಾದ ಅದೆಷ್ಟೋ ಅನಾಥ ಮಕ್ಕಳ ಬಾಯಲ್ಲಿ ಅಪ್ಪ ಅನ್ನಿಸಿಕೊಳ್ಳುವ ವಿಶೇಷ ವ್ಯಕ್ತಿಯೊಬ್ಬರು ನಮ್ಮ ನಿಮ್ಮ ನಡುವೆ ಇದ್ದಾರೆ.

ಹೌದು ಪಟ್ಟಣದ ಬ್ಲೆಸ್ಸಿಂಗ್ ಚಿಲ್ಡ್ರನ್ಸ್ ಹೋಮ್ ಆಶ್ರಮ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಮೂಲಕ ನಿಜಪ್ಪ ಹಿರೇಮನಿ ಅನ್ನುವ ವ್ಯಕ್ತಿಯೊಬ್ಬರು ತಮ್ಮ ವಿಭಿನ್ನವಾದ ಸಮಾಜ ಸೇವೆಯ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಒಬ್ಬ ತಂದೆ ತನ್ನದಲ್ಲದ ನೂರಾರು ಅನಾಥ. ಅಸಹಾಯಕ ಮಕ್ಕಳ ಆಶ್ರಯದಾತರಾಗಿ ಅಂತಹ ಮಕ್ಕಳಿಗೆ ಊಟ ,ವಸತಿ, ವಿದ್ಯೆ, ಉದ್ಯೋಗ ಕೊಡಿಸುತ್ತ ಯಾರೂ ದಿಕ್ಕಿಲ್ಲದ ದೇವರ ಮಕ್ಕಳ ಬದುಕು ಕಟ್ಟುವ ಮೂಲಕ ಅದೆಷ್ಟೋ ಮಕ್ಕಳ ಪಾಲಿಗೆ ತಂದೆಯ ಸ್ಥಾನದಲ್ಲಿ ಇದ್ದಾರೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ನೂರಾರು ಎಚ್ ಐ ವಿ ಪೀಡಿತ ಕುಟುಂಬಗಳ ಮಕ್ಕಳು ಅವರ ಕುಟುಂಬದವರ ಅಸಡ್ಡೆಗೆ ಒಳಗಾಗದಂತೆ ಅವರ ಮನೋಸ್ಥೈರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿಮ್ಮೊಂದಿಗೆ ನಾವು ಇದ್ದೇವೆ ಅನ್ನುವ ಭರವಸೆಯ ಬೆಳಕಾಗುತ್ತ ಎಚ್. ಐ.ವಿ ಬಾಧಿತವಾದ ಪೆÇೀಷಕರ ಮಕ್ಕಳನ್ನೂ ಕೂಡ ತಮ್ಮ ಸುಪರ್ದಿಗೆ ತೆಗೆದುಕೊಂಡು ಅವರ ಎಲ್ಲ ಖರ್ಚು ವೆಚ್ಚಗಳನ್ನು ನಿಭಾಯಿಸುವ ಮೂಲಕ ಆ ಮಕ್ಕಳ ಪಾಲಿನ ಆಶಾ ಕಿರಣವಾಗಿ ಮಮತೆಯಿಂದ ಅಂತಹ ಮಕ್ಕಳಿಗೆ ಪ್ರೀತಿ ಮತ್ತು ಕಾಳಜಿ ತೋರಿಸುವ ಮೂಲಕ ಆ ಮಕ್ಕಳ ಬಾಯಲ್ಲಿ ಅಪ್ಪ ಅನ್ನಿಸಿಕೊಂಡದ್ದು ನಿಜಪ್ಪ ಹಿರೇಮನಿ ಅವರ ಬದುಕಿನ ಅಮೃತ ಘಳಿಗೆ ಅಂದರೆ ತಪ್ಪಾಗಲಾರದು.
ಎಚ್ ಐ ವಿ ಬಾಧಿತರ ಮಕ್ಕಳಿಗೆ ಎಚ್ ಐ ವಿ ಹರಡದಂತೆ ಚಿಕಿತ್ಸೆ ಕೊಡಿಸುವ ಜವಾಬ್ದಾರಿ ಹೊತ್ತು ಎಚ್ ಐ ವಿ ಬಾಧಿತರ ಬದುಕಿನಲ್ಲಿ ಹೊಸ ಕನಸುಗಳನ್ನು ಬಿತ್ತುವ ಮೂಲಕ ಅವರು ನೆಮ್ಮದಿಯಿಂದ ಬದುಕುವಂತೆ ಮತ್ತು ಎಲ್ಲರಂತೆ ಅವರೂ ಕೂಡ ಜೀವನ ನಡೆಸುವಂತೆ ಪ್ರೇರಣೆ ನೀಡಿದ್ದು ಇದೇ ನಿಜಪ್ಪ ಹಿರೇಮನಿ ಮತ್ತು ಸಂಗೀತಾ ಹಿರೇಮನಿ ಅನ್ನುವ ದಂಪತಿ.
ನಿಜಪ್ಪ ಹಿರೇಮನಿ ಇಂದಿಗೂ ಶಾಲಾ ಕಾಲೇಜುಗಳಿಗೆ ಜಾತ್ರೆಗಳಿಗೆ ತೆರಳಿ ಎಚ್ ಐ ವಿ ಮುಂಜಾಗೃತಾ ಮತ್ತು ದೇವದಾಸಿ ಪದ್ಧತಿ ನಿರ್ಮೂಲನೆಯ ಜಾಗೃತಿ ಮೂಡಿಸುತ್ತಿರುವ ಅವರ ಸಾಮಾಜಿಕ ಸೇವೆ ಅನನ್ಯವಾದದ್ದು.
ಇಲ್ಲಿಯವರೆಗೆ ಸಾವಿರಾರು ಅನಾಥ ಮಕ್ಕಳಿಗೆ ಊಟ, ವಸತಿ ಮತ್ತು ಶಿಕ್ಷಣ ನೀಡುವದರಲ್ಲಿ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವ ನಿಜಪ್ಪ ಹಿರೇಮನಿ ಅಷ್ಟೇ ಸಂಕೋಚದ ಸ್ವಭಾವದವರು ಅಂದರೆ ತಪ್ಪಾಗಲಾರದು.
ಬಲಗೈಯಿಂದ ಮಾಡಿದ ದಾನ ಎಡಗೈಗೆ ತಿಳಿಯಬಾರದು ಅನ್ನುವಂತಹ ಸಂಕೋಚದ ಸ್ವಭಾವ ಹೊಂದಿರುವ ನಿಜಪ್ಪ ಹಿರೇಮನಿ ಎಂದಿಗೂ ಕೂಡ ಪ್ರಚಾರಕ್ಕಾಗಿ ಸಮಾಜ ಸೇವೆಯನ್ನು ಮಾಡದೇ ಎಲೆಮರೆ ಕಾಯಿಯಂತೆ ಅದೆಷ್ಟೋ ಅನಾಥ ಮಕ್ಕಳ ಪಾಲಿನ ಅಪ್ಪನಾಗಿ ಅಸಂಖ್ಯಾತ ಮಕ್ಕಳ ಪಾಲಿನ ಪೆÇೀಷಕರಾಗಿ ಉಳಿದದ್ದು ಅಥಣಿಯ ಹೆಮ್ಮೆ ಅನ್ನುವದು ಹಲವರ ಅಭಿಪ್ರಾಯ.
ತಮ್ಮ ಸಂಸ್ಥೆಗೆ ಅಸರೆ ಬಯಸಿ ಬರುವ ಮಕ್ಕಳಲ್ಲಿ
ಜಾತಿ, ಧರ್ಮ ಮತ್ತು ಲಿಂಗ ತಾರತಮ್ಯ ಮಾಡದೇ ಅದೆಷ್ಟೋ ಮಕ್ಕಳಿಗೆ ಊಟ, ವಸತಿ ಕಲ್ಪಿಸುವದರ ಜೊತೆಗೆ ಅಂತಹ ಅನಾಥ ಮಕ್ಕಳ ಶೈಕ್ಷಣಿಕ ಜೀವನಕ್ಕೂ ಭದ್ರ ಬುನಾದಿ ಹಾಕುತ್ತಿರುವ ನಿಜಪ್ಪ ಹಿರೇಮನಿ ಅಂತಹ ಸಮಾಜ ಸೇವಕರ ಸಂಖ್ಯೆ ಮತ್ತಷ್ಟು ಹೆಚ್ಚುವ ಮೂಲಕ ದೀಪದಿಂದ ದೀಪವ ಹಚ್ಚಬೇಕು ಮಾನವ ಅನ್ನುವ ಮಾತು ನಿಜವಾಗಲಿ ಅನ್ನುವ ಆಶಯದೊಂದಿಗೆ ಫಾದರ್ಸ್ ಡೇ ಎಂಬ ವಿಶೇಷ ದಿನದಂದು ನಿಜಪ್ಪ ಹಿರೇಮನಿ ಅವರಿಗೊಂದು ಅಭಿನಂದನೆ ಸಲ್ಲಿಸೋಣ.

ದಾನಿಗಳು ಸಂಪರ್ಕಿಸಬೇಕಾದ ವಿಳಾಸ:
ನಿಜಪ್ಪ ರಜನೀಕಾಂತ್ ಹಿರೇಮನಿ ಕೆಂದ್ರ ಶಾಲೆ ನಂ-1 ಹತ್ತಿರ ಹಿಪ್ಪರಗಿ ಗಲ್ಲಿ ಅಥಣಿ-591304
ಮೊಬೈಲ್ ನಂ- 9964317012 / 8970228824