ಅವನತಿ ಹೊಂದುತ್ತಿರುವ ತೊಗಲುಗೊಂಬೆ ಕಲೆಗೆ ಎಲ್ಲರ ಪ್ರೋತ್ಸಾಹ ಅಗತ್ಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.17: ಪುರಾಣ ಕಾಲದ ಐತಿಹ್ಯ ಹೊಂದಿರುವ ತೊಗಲುಗೊಂಬೆ ಕಲೆ ಇಂದು ಅವನತಿ ಹೊಂದುತ್ತಿದ್ದು ಸರ್ಕಾರ, ಸಂಘ ಸಂಸ್ಥೆಗಳು ಮತ್ತು ನಾಗರೀಕರು ಉಳಿಸಿ ಬೆಳೆಸುವುದು ಅಗತ್ಯವಿದೆ ಎಂದು ಪತ್ರಕರ್ತ ಎಂ.ಇ.ಜೋಷಿ ಹೇಳಿದರು.
ಹೊನ್ನಳ್ಳಿ ರಸ್ತೆಯಲ್ಲಿರುವ ಗುಗ್ಗರಹಟ್ಟಿ ಶರಭೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಳ್ಳಾರಿಯ ಹುಲಿಕುಂಟೇಶ್ವರ ತೊಗಲುಗೊಂಬೆ ಕಲಾ ತಂಡ ಹಾಗೂ ಶರಭೇಶ್ವರ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಪ್ರಶಿಕ್ಷಣಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ತೊಗಲುಗೊಂಬೆ ತರಬೇತಿ, ಪ್ರದರ್ಶನ, ವಿಚಾರ ಸಂಕಿರಣ ಮತ್ತು ದೇಶಭಕ್ತಿ ಗೀತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿ ಮಾತನಾಡಿ, ತೊಗಲುಗೊಂಬೆ ಕಲಾವಿದರ ಬದುಕು ಇಂದು ತೀವ್ರ ಸಂಕಷ್ಟ ಸ್ಥಿತಿಯಲ್ಲಿದೆ. ಈ ಕಲೆಗೆ ಪ್ರೋತ್ಸಾಹ ಇರದೇ ಇರುವುದರಿಂದ ಕಲಾವಿದರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ತುಂಬಾ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಎಂದರು. 
ಶರಭೇಶ್ವರ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಶಿವಾನಂದ ಕೆ.ಎಂ. ಅವರು ತೊಗಲುಗೊಂಬೆಯ ಚರಿತ್ರೆ ಬಗ್ಗೆ ಮಾತನಾಡಿ, ಕ್ರಿ.ಪೂ. ಕಾಲದಿಂದಲೂ ತೊಗಲುಗೊಂಬೆಗೆ ತನ್ನದೇ ಆದ ಮಹತ್ವ ಇದೆ. ಜಿಂಕೆ ಮತ್ತು ಆಡಿನ ಚರ್ಮ ಬಳಸಿ ಗೊಂಬೆಗಳನ್ನು ತಯಾರಿಸಿ ರಾಮಾಯಣ, ಮಹಾಭಾರತ ಸೇರಿದಂತೆ ಸರ್ಕಾರದ ಯೋಜನೆಗಳನ್ನೂ ಸಾದರಪಡಿಸಲಾಗುತ್ತಿದೆ. ಈ ಕಲಾವಿದರು ರಾಮಾಯಣ ಕಾಲದ ಗುಹಾ ವಂಶಕ್ಕೆ ಸೇರಿದವರು. ಇವರಿಗೆ ಪ್ರಾಚೀನತೆ ಇದೆ. ಶಾತವಾಹನ, ಪಲ್ಲವ, ಕಾಕತೀಯ ರಾಜು ಒಳಗೊಂಡಂತೆ ವಿಜಯನಗರ ಆಳರಸರ ಕಾಲದಲ್ಲೂ ಈ ಕಲೆ ತುಂಬಾ ಉಚ್ಛಾಯ ಸ್ಥಿತಿಯಲ್ಲಿತ್ತು ಎಂದರು. 
ಮಕ್ಕಳ ಸಾಹಿತಿ ಸರೋಜಾ ಬ್ಯಾತನಾಳ ಮಾತನಾಡಿ, ನೋವು ಮರೆಯಲು ಸಾಹಿತ್ಯ, ಸಂಗೀತದ ಜೊತೆ ತೊಗಲುಗೊಂಬೆ ಕಲೆಯನ್ನೂ ಪ್ರೋತ್ಸಾಹಿಸಬೇಕು. ಮುಂದಿನ ನಾಗರಿಕತೆಗೆ ಈ ಕಲೆ ಊರ್ಜಿತಗೊಳಿಸಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ  ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಕಲಾವಿದರು, ಅಧ್ಯಕ್ಷರು ಹಾಗೂ ಸಂಚಾಲಕರಾದ ಕೆ.ಹೊನ್ನೂರುಸ್ವಾಮಿ, ನಶಿಸಿ ಹೋಗುತ್ತಿರುವ ಈ ಕಲೆ ಬಗ್ಗೆ ವಿಷಾದವಿದೆ. ಆದರೂ ಈ ಕಲೆಯನ್ನೇ ನಂಬಿ ಉಸಿರಾಡುತ್ತಿದ್ದೇವೆ ಎಂದರು.
ಶರಭೇಶ್ವರ ವಿದ್ಯಾಪೀಠದ ಅಧ್ಯಕ್ಷೆ ಲಲಿತಾಕ್ಷಿ ದಕ್ಷಿಣಾಮೂರ್ತಿ ಉದ್ಘಾಟಿಸಿದರು. ಬಾಲ್ಯ ವಿವಾಹವನ್ನು ತಡೆಗಟ್ಟುವ ಕುರಿತ ತೊಗಲುಗೊಂಬೆ ತರಬೇತಿ ಮತ್ತು ಪ್ರದರ್ಶನವನ್ನು ಸಾಯಿದಾ ಬೇಗಂ, ಅರುಣ ಕುಮಾರಿ, ತುಳಸಿ, ತೇಜಮ್ಮ, ನಫೀಸಾ, ಸಾಬ್ಬಮ್ಮ ನಡೆಸಿಕೊಟ್ಟರು. ಶಾಂತವ್ವ, ಮಹೇಶ್ವರಿ, ಇಂಡಿ ದೇವರಾಜ್, ಕಾವ್ಯ, ಜ್ಞಾನೇಶ್ವರಿ, ನಂದಿನಿ ಮತ್ತು ನಾಗರಾಜ ಇವರು ದೇಶಭಕ್ತಿ ಗೀತೆ ಮತ್ತು ಜಾನಪದ ಗೀತೆಗಳನ್ನು ಹಾಡಿದರು. ಸಹ ಪ್ರಾಧ್ಯಾಪಕರಾದ ಶಶಿಧರ ಡಿ., ಮಲ್ಲಿಕಾರ್ಜುನ, ಕಲಾವಿದ ಉಮೇಶ್ ಇನ್ನಿತರರು ಇದ್ದರು. ಶಾಂತವ್ವ, ಮಹೇಶ್ವರಿ ಪ್ರಾರ್ಥಿಸಿದರು. ಕಾವ್ಯಶ್ರೀ ಸ್ವಾಗತಿಸಿದರು. ಗೌತಮ್ ಬಿ. ನಿರೂಪಿಸಿದರು. ಪ್ರಶಿಕ್ಷಣಾರ್ಥಿ ವಂದಿಸಿದರು.

Attachments area