ಅವನತಿಯ ಹಾದಿಯತ್ತ ಕಾಂಗ್ರೆಸ್

ಬೆಂಗಳೂರು, ನ. ೧೧- ದೇಶದಲ್ಲಿ ಕಾಂಗ್ರೆಸ್ ಪಕ್ಷ ಅವನತಿಯ ಜಾರುಗುಪ್ಪೆಯಲ್ಲಿ ಇಳಿಯುತ್ತಿದೆ. ಬಿಜೆಪಿಯ ಪ್ರಖರತೆಯ ವಿಸ್ತಾರವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ಸದಾಶಿವನಗರದ ತಮ್ಮ ಮನೆಗೆ ರಾಜರಾಜೇಶ್ವರಿನಗರದ ಶಾಸಕ ಮುನಿರತ್ನ ಭೇಟಿ ನೀಡಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ ಅವರು, ದೇಶದಲ್ಲಿ ಬದಲಾವಣೆ ಆಗುತ್ತಿದೆ. ಬಿಜೆಪಿ ವ್ಯಾಪಕವಾಗುತ್ತಿದೆ ಎಂದು ಬಿಹಾರ ಮತ್ತು ಉಪಚುನಾವಣೆಯ ಗೆಲುವಿನ ಬಗ್ಗೆ ವಿಮರ್ಶಿಸಿದರು.
ದೇಶದ ಪ್ರಧಾನಿ ಮೋದಿ ರಾಜಋಷಿ, ಮೋದಿ ಅವರಿಗೆ ಯಾವ ಪ್ರಲೋಪಗಳು ಇಲ್ಲ. ಅವರಿಗೆ ದೇಶವೇ ದೇವರು. ಈ ದೇಶಕ್ಕೆ ಅವರುಪ್ರಧಾನಿಯಾಗಿದ್ದು ನಮ್ಮೆಲ್ಲರ ಸೌಭಾಗ್ಯ ಎಂದು ಎಸ್.ಎಂ. ಕೃಷ್ಣಾ ಬಣ್ಣಿಸಿದರು.
ಪ್ರಧಾನಿ ಮೋದಿ ಅವರು ಹಗಲಿರುಳು ದೇಶಕ್ಕೆ ದುಡಿಯುತ್ತಿದ್ದಾರೆ. ರಾಜ್ಯದಲ್ಲೂ ಯಡಿಯೂರಪ್ಪ ಅವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಮತ್ತೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಎಂಬ ಚರ್ಚೆಯ ಬಗ್ಗೆ ತೆಲುಗಿನ ಗಾದೆ ಮಾತು ಹೇಳಿ ಟಾಂಗ್ ನೀಡಿದ ಅವರು, ಅಡೆವುದಕ್ಕೆ ಅವಳೇ ಇಲ್ಲ, ಮಗುವಿಗೆ ಹೆಸರು ಇಟ್ಟರು ಎನ್ನುವ ಹಾಗೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷದ ಬಗ್ಗೆ ನಾನು ಜಾಸ್ತಿ ಮಾತನಾಡಲ್ಲ. ಅವರ ಮನೆಯನ್ನು ಅವರೇ ಸರಿ ಮಾಡಿಕೊಳ್ಳಬೇಕು. ದೇಶದಲ್ಲಿ ಗಟ್ಟಿ ಪ್ರತಿಪಕ್ಷ ಇರಬೇಕು ಎಂದು ಅವರು ಹೇಳಿದರು.