ಕಲಬುರಗಿ,ಜು.06:ಪ್ರಸಕ್ತ 2023ರ ಜೂನ್ ರಿಂದ ಆಗಸ್ಟ್ ಮಾಹೆಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ಅವಧಿ ಮುಕ್ತಾಯವಾಗಲಿರುವ 10 ಗ್ರಾಮ ಪಂಚಾಯಿತಿಗಳ 157 ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ಖಾಲಿ ಇರುವ / ತೆರವಾದ ವಿವಿಧ ತಾಲೂಕಿನ 7 ಗ್ರಾಮ ಪಂಚಾಯತಿಗಳ 7 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್‍ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮದನ್ವಯ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ.
ಚುನಾವಣಾ ವೇಳಾಪಟ್ಟಿಯಂತೆ ನಾಮಪತ್ರ ಸಲ್ಲಿಸಲು ಜುಲೈ 12ರಂದು ಕೊನೆಯ ದಿನವಾಗಿದೆ. ಜುಲೈ 13ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಜುಲೈ 15 ಅಂತಿಮ ದಿನವಾಗಿರುತ್ತದೆ. ಮತದಾನದ ಅವಶ್ಯವಿದ್ದಲ್ಲಿ ಜುಲೈ 23 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಇನ್ನೂ ಮರುಮತದಾನದ ಅವಶ್ಯವಿದ್ದಲ್ಲಿ ಮರು ಮತದಾನವು ಜುಲೈ 25 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಜುಲೈ 26ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರ ಸ್ಥಳದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳ ಹೆಸರು ಹಾಗೂ ಸದಸ್ಯ ಸ್ಥಾನಗಳ ವಿವರ ಇಂತಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿರಗುಡಿ ಗ್ರಾಮ ಪಂಚಾಯಿತಿ 23 ಸದಸ್ಯ ಸ್ಥಾನಗಳು, ಭೂಸನೂರ ಗ್ರಾಮ ಪಂಚಾಯಿತಿಯ 15 ಸದಸ್ಯ ಸ್ಥಾನಗಳು, ಹಿತ್ತಲ ಶಿರೂರ ಗ್ರಾಮ ಪಂಚಾಯಿತಿಯ 17 ಸದಸ್ಯ ಸ್ಥಾನಗಳು, ಧುತ್ತರಗಾಂವ ಗ್ರಾಮ ಪಂಚಾಯಿತಿಯ 21 ಸದಸ್ಯ ಸ್ಥಾನಗಳು ಹಾಗೂ ಡಣ್ಣೂರ ಗ್ರಾಮ ಪಂಚಾಯಿತಿಯ 12 ಸದಸ್ಯ ಸ್ಥಾನಗಳು. ಜೇವರ್ಗಿ ತಾಲೂಕಿನ ರಂಜಣಗಿ ಗ್ರಾಮ ಪಂಚಾಯಿತಿಯ 14 ಸದಸ್ಯ ಸ್ಥಾನಗಳು ಹಾಗೂ ಮದರಿ ಗ್ರಾಮ ಪಂಚಾಯಿತಿಯ 14 ಸದಸ್ಯ ಸ್ಥಾನಗಳು. ಕಾಳಗಿ ತಾಲೂಕಿನ ಶೆಳ್ಳಗಿ ಗ್ರಾಮ ಪಂಚಾಯಿತಿಯ 9 ಸದಸ್ಯ ಸ್ಥಾನಗಳು. ಯಡ್ರಾಮಿ ತಾಲೂಕಿನ ಕರ್ಕಿಹಳ್ಳಿ ಗ್ರಾಮ ಪಂಚಾಯಿತಿಯ 17 ಸದಸ್ಯ ಸ್ಥಾನಗಳು ಹಾಗೂ ಚಿತ್ತಾಪುರ ತಾಲೂಕಿನ ಕೊಲ್ಲೂರ ಗ್ರಾಮ ಪಂಚಾಯಿತಿಯ 15 ಸದಸ್ಯ ಸ್ಥಾನಗಳು.
ಉಪ ಉಪಚುನಾವಣೆ ನಡೆಯುವ ಸದಸ್ಯ ಸ್ಥಾನಗಳ ವಿವರ. ಕಲಬುರಗಿ ತಾಲೂಕಿನ 01-ಅವರಾದ-ಬಿ ಗ್ರಾಮ ಪಂಚಾಯಿತಿ 04-ಉಪಳಾಂವ ಕ್ಷೇತ್ರದ 1 ಸ್ಥಾನ, ಆಳಂದ ತಾಲೂಕಿನ 36-ಧÀಂಗಾಪೂರ ಗ್ರಾಮ ಪಂಚಾಯಿತಿಯ 03-ಭಟ್ಟರ್ಗಾ ಕ್ಷೇತ್ರದ 01 ಸ್ಥಾನ, ಅಫಜಲಪೂರ ತಾಲೂಕಿನ 03-ಮಾಶಾಳ ಗ್ರಾಮ ಪಂಚಾಯಿತಿ 05-ಮಾಶಾಳ ಕ್ಷೇತ್ರದ 01 ಸ್ಥಾನ ಮತ್ತು 10-ಬಡದಾಳ ಗ್ರಾಮ ಪಂಚಾಯಿತಿ 02-ಬಡದಾಳ ಕ್ಷೇತ್ರದ 01 ಸ್ಥಾನ. ಸೇಡಂ ತಾಲೂಕಿನ 18-ಮದನಾ ಗ್ರಾಮ ಪಂಚಾಯಿತಿಯ 04-ಕಡಚೆರ್ಲಾ ಕ್ಷೇತ್ರದ 01 ಸ್ಥಾನ, ಚಿಂಚೋಳಿ ತಾಲೂಕಿನ 14-ಕರಚಖೇಡ ಗ್ರಾಮ ಪಂಚಾಯಿತಿಯ 04-ಇರಗಪಲ್ಲಿ ಕ್ಷೇತ್ರದ 01 ಸ್ಥಾನ ಹಾಗೂ ಯಡ್ರಾಮಿ ತಾಲೂಕಿನ ಮಾಗಣಗೇರಾ ಗ್ರಾಮ ಪಂಚಾಯಿತಿಯ 02-ಕಣಮೇಶ್ವರ ಕ್ಷೇತ್ರದ 1 ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.