ಅವಘಡಗಳ ನಿಯಂತ್ರಣದಲ್ಲಿ ಅಗ್ನಿಶಾಮಕದ ಪಾತ್ರ ಅಮೋಘ

ಕಲಬುರಗಿ.ಏ.20:ಬೆಂಕಿ ಅನಾಹುತವಾದಾಗ ನಂದಿಸುವುದು, ಭೂಕಂಪ, ಜ್ವಾಲಾಮುಖಿ, ಭೂಕುಸಿತದಂತಹ ನೈಸರ್ಗಿಕ ಅವಘಡಗಳು, ಅಫಘಾತ, ಪ್ರವಾಹದಲ್ಲಿ ಸಿಲುಕಿಕೊಂಡಿರುವ ಮನುಷ್ಯ,ಪ್ರಾಣಿಗಳು, ಆಸ್ತಿ-ಪಾಸ್ತಿಯ ರಕ್ಷಣೆ, ಸಾಂಕ್ರಾಮಿಕ ಕಾಯಿಲೆಗಳು ಉಂಟಾಗಿ ಜನರಿಗೆ ತೊಂದರೆಯಾದಾದ ಅವರ ರಕ್ಷಣೆ ಸೇರಿದಂತೆ ಮುಂತಾದ ಸಂದರ್ಭಗಳಲ್ಲಿ ಅಗ್ನಿಕರೆ ಮತ್ತು ರಕ್ಷಣಾ ಕರೆಗೆ ಅಗ್ನಿಶಾಮಕವು ತ್ವರಿತಗತಿಯಲ್ಲಿ ಸ್ಪಂದನೆ ಮಾಡುವ ಮೂಲಕ ಅವಘಡಗಳು, ತೊಂದರೆಗಳನ್ನು ನಿವಾರಣೆ ಮಾಡುವ ಕಾರ್ಯದಲ್ಲಿ ಅಗ್ನಿಶಾಮಕದ ಪಾತ್ರ ಅಮೋಘವಾಗಿದೆಯೆಂದು ಅಗ್ನಿಶಾಮಕ ಠಾಣಾಧಿಕಾರಿ ಅಂಕುಶ ಎ.ಅಳಂದೆ ಅಭಿಮತ ವ್ಯಕ್ತಪಡಿಸಿದರು.
ನಗರದ ಅಗ್ನಿಶಾಮಕ ಠಾಣೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಹಾಗೂ ‘ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’ ಇವುಗಳ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ಅಗ್ನಿಶಾಮಕ ಸೇವಾ ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಭಿವೃದ್ಧಿಯ ನೆಪದಲ್ಲಿ ನಿಸರ್ಗದ ಮೇಲಿನ ಮಾನವನ ದಬ್ಬಾಳಿಕೆಯಿಂದ ನೈಸರ್ಗಿಕ ಅವಘಡಗಳ ಸಂಖ್ಯೆ ಹೆಚ್ಚಾಗುತ್ತಿವೆ. ಪರಿಸರದ ರಕ್ಷಣೆ ಮಾಡವುದು ಅಗತ್ಯವಾಗಿದೆ. ಜನರಲ್ಲಿ ಅವಘಡಗಳ ಬಗ್ಗೆ ಮುಂಜಾಗ್ರತೆ ಕೈಗೊಳ್ಳಲು ಆಗಾಗ್ಗೆ ಅಣಕು ಪ್ರದರ್ಶನ ಮಾಡಲಾಗುತ್ತಿದೆ. 1944ರ ಏ.14ರಂದು ಮುಂಬೈ ಬಂದರಿನಲ್ಲಿ ಹಡಗಿನಲ್ಲಿ ಬೆಂಕಿ ಅವಘಡ ಸಂಭವಿಸಿ 71 ಜನ ಸಿಬ್ಬಂದಿ, 1300 ಜನರು ಸಾವನಪ್ಪಿದ್ದರ ನೆನಪಿಗಾಗಿ ಪ್ರತಿವರ್ಷ ಏ.14 ರಿಂದ 20 ರವರೆಗೆ ಒಂದು ವಾರದ ಕಾಲ ಅಗ್ನಿಶಾಮಕ ಸೇವಾ ಸಪ್ತಾಹ ಆಚರಿಸಲಾಗುತ್ತದೆಯೆಂದು ಹಿನ್ನಲೆಯನ್ನು ವಿವರಿಸಿದರು.
ಮುಖ್ಯ ಅಗ್ನಿಶಾಮಕ ಅಧಿಕಾರಿ ರವಿಪ್ರಸಾದ ಮತ್ತು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಟಿ.ಪರುಷರಾಮ ಅವರ ಮಾರ್ಗದರ್ಶನದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಸುನೀಲಕುಮಾರ ವಂಟಿ, ದೇವೇಂದ್ರಪ್ಪ ಗಣಮುಖಿ, ಎಸ್.ಎಸ್.ಪಾಟೀಲ ಬಡದಾಳ, ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಾದ ಶೇಖಚಾಂದ್, ಮೋತಿಲಾಲ್ ಪತಂಗೆ, ಶಾಂತಪ್ಪ ಪಟ್ಟೇದಾರ, ಅಮೀತಕುಮಾರ್, ಅಂಬರೀಶ ನಾಯಕ, ಹೊನ್ನಪ್ಪ ಹುಲ್ಲೂರ, ಶಂಕರಲಿಂಗ ಗುರುನಂಜಿ, ಪ್ರಮೋದ ಬಳೂಂಡಗಿ, ಫಾರೂಖ್ ಅಲಿ, ಆನಂದಕುಮಾರ, ಬಸವರಾಜ ನಾಶಿ, ಮಹೇಶ್ವರ, ಪುಂಡಲಿಕ ಚಿಂಚನಸೂರ, ಸಿದ್ದಪ್ಪ ಸಲಗರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.