ಅವಕಾಶ ಸಿಕ್ಕರೆ ಜವಾಬ್ದಾರಿ ನಿರ್ವಹಿಸಲು ಸಿದ್ದ: ಡಾ. ಎಸ್.ಬಿ. ಕಾಮರೆಡ್ಡಿ

ಯಾದಗಿರಿ.ನ.21; ನಾನು ಮೂಲ ಯಾದಗಿರಿ ಜಿಲ್ಲೆಯವನಾಗಿದ್ದು ಅವಿಭಜಿತ ಕಲ್ಬುರ್ಗಿ ಜಿಲ್ಲೆಯಾಗಿದ್ದಾಗಿನಿಂದಲೂ ಜನ ಸೇವೆ ಮಾಡಿಕೊಂಡು ಬಂದಿದ್ದು, ಮತ್ತೊಂದು ಸೇವೆಯ ಅವಕಾಶ ದೊರಕಿದಲ್ಲಿ ಜಿಲ್ಲೆಯ ಋಣ ತೀರಿಸಲು ಬದ್ಧನಾಗಿದ್ದೇನೆ ಎಂದು ಖ್ಯಾತ ಮೂಳೆ ತಜ್ಞ ಡಾ|| ಎಸ್.ಬಿ. ಕಾಮರೆಡ್ಡಿ ಪ್ರಕಟಿಸಿದರು.
ತಮ್ಮ 53ನೇ ಹುಟ್ಟುಹಬ್ಬದ ಅಂಗವಾಗಿ ಜಿಲ್ಲೆಯ ಆರಾಧ್ಯ ದೈವ ಮೈಲಾರಲಿಂಗೇಶ್ವರದ ದರ್ಶನ ಮಾಡಿಕೊಂಡ ನಂತರ ಅಭಿಮಾನಿಗಳ ಮದ್ಯೆ ಸರಳ ಹುಟ್ಟುಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡ ನಂತರ ನಗರದ ಎನ್.ವಿ.ಎಂ. ಹೊಟೇಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಂದೆ ನಿವೃತ್ತಿ ನಂತರ ಅಂದಿನ ನಾಯಕರಾಗಿದ್ದ ಡಾ|| ಎ.ಬಿ. ಮಾಲಕರೆಡ್ಡಿ ಅವರ ಕಟ್ಟಾ ಬೆಂಬಲಿಗರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಕಾಲದಿಂದಲೂ ಕಾಂಗ್ರೆಸ್‍ನಲ್ಲಿಯೇ ಇದ್ದರೂ ಸಹ ಕೇವಲ ವೈದ್ಯ ವೃತ್ತಿಯಿಂದ ಸಮಾಜ ಸೇವೆಯನ್ನು ರೂಢಿಸಿಕೊಂಡು ಬಂದಿದ್ದು, ನಿರಂತರ ವೈದ್ಯಕೀಯ ವೃತ್ತಿಯಲ್ಲಿದ್ದುಕೊಂಡೇ ನನ್ನ ಭಾಗಕ್ಕೆ ಸೇವೆ ಸಲ್ಲಿಸಿದ್ದೇನೆ. ವಿಶೇಷವಾಗಿ ಕೊರೋನಾ ವೇಳೆಯಲ್ಲಿಯೂ ಹಾಗೂ ನೆರೆ ಮಳೆಯ ಹೊರೆಯ ಸಂದರ್ಭದಲ್ಲಿಯೂ ಸಹ ಕೈಲಾದ ಅಳಿಲು ಸೇವೆ ಸಲ್ಲಿಸಿದ್ದು ಇದೆ ಎಂದು ತಿಳಿಸಿದರು.
ಈದೀಗ ಅಭಿಮಾನಿಗಳ ಒತ್ತಾಸೆ ಮತ್ತು ನನ್ನ ತವರು ಜಿಲ್ಲೆಯಾದ ಯಾದಗಿರಿಯ ವಡಗೇರಿ ತಾಲ್ಲೂಕಿನ ಬೆಂಡೆಬೆಂಬಳಿಯವನೇ ಆಗಿರುವ ನಾನು ನನ್ನ ಜಿಲ್ಲೆ ನನ್ನ ಊರಿನ ಸೇವೆಗೆ ಸದಾ ಸಿದ್ಧನಾಗಿರುವೆ ಎಂದು ಪ್ರಕಟಿಸಿದರು.
ಈಗಾಗಲೇ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್‍ನ ಸ್ಥಾನ ತೆರವಾಗಿರುವುದರಿಂದ ಆ ಸ್ಥಾನದ ಆಕಾಂಕ್ಷಿಯೇ ಎಂದು ಪ್ರಶ್ನಿಸಿದಾಗ ನಾನು ಆಕಾಂಕ್ಷಿ ಎನ್ನುವುದಕ್ಕಿಂತ ಸೇವೆಯೇ ಪರಮೋ ಧರ್ಮ ಎಂದು ಭಾವಿಸಿ ವೈದ್ಯ ಕಾಯಕದಲ್ಲಿಯೂ ಸೇವೆ ಮಾಡಿಕೊಂಡು ಬಂದಿದ್ದು ಈದೀಗ ನನ್ನ ತವರು ನೆಲದ ಋಣ ತೀರಿಸಲು ಇನ್ನಷ್ಟು ಜವಬ್ದಾರಿ ದೊರೆತಲ್ಲಿ ಸೇವೆಗೆ ನಾನು ಸಿದ್ಧನಿದ್ದೇನೆ ಎಂದು ಪರೋಕ್ಷವಾಗಿ ತಾವು ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಎಂದು ಒಪ್ಪಿಕೊಂಡರು.
ಈ ಸಂದರ್ಭದಲ್ಲಿ ಶಾಂತರೆಡ್ಡಿ ದೇಸಾಯಿ ನಾಯ್ಕಲ್, ವೆಂಕಟರೆಡ್ಡಿ ಗುರುಸುಣಿಗಿ ಸೇರಿದಂತೆ ಹಲವಾರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.