ಅವಕಾಶವಾದಿಗಳಿಗೆ ಟಿಕೆಟ್ ಕೊಡಬೇಡಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ28:  ನಿಷ್ಠಾವಂತ ಕಾರ್ಯಕರ್ತ ಎಚ್.ಎನ್.ಎಫ್ ಇಮಾಮ್ ನಿಯಾಜಿ ಅವರಿಗೆ ಕಾಂಗ್ರೆಸ್  ಟಿಕೆಟ್ ನೀಡದೆ ಅನ್ಯಾಯವೆಸೆಗಿದ್ದು, ಪಕ್ಷ ಅಲ್ಪಾಸಂಖ್ಯಾತರನ್ನು ಕಡೆಗಣೆಸಿದೆ ಎಂದು ಮುಖಂಡ ವೆಂಕೋಬಪ್ಪ ಆರೋಪಿಸಿದರು.
ಎಚ್.ಆರ್.ಗವಿಯಪ್ಪರಿಗೆ ವಿಜಯನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಿದ್ದನ್ನು ಖಂಡಿಸಿ ಮುಸ್ಲಿಂ ಸಮುದಾಯದ ಬೆಂಬಲಿಗರು ನಗರದ ಡಾ.ಪುನೀತ್ ರಾಜಕುಮಾರ್ ವೃತ್ತದ ಬಳಿ ಸೋಮವಾರ  ಪ್ರತಿಭಟನೆ ನಡೆಸಿದ ಸಂದರ್ಭ ಮಾತನಾಡಿದರು. ಎಚ್.ಎನ್.ಎಫ್ ಇಮಾಮ್ ನಿಯಾಜಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿದ್ದಾರೆ. ಅವರು 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ದುಡಿದಿದ್ದಾರೆ.
ನಗರ ಹಾಗೂ ಪ್ರತಿ ಮನೆ ಮನೆಗಳಿಗೆ ತೆರಳಿ ಪಕ್ಷವನ್ನು ಸದೃಢಗೊಳಿಸಿದ್ದಾರೆ.
ಆದರೆ, ಪಕ್ಷವನ್ನು ಬಿಟ್ಟು ಹೋಗಿ ಬಂದ ಅವಕಾಶವಾದಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಗವಿಯಪ್ಪರಿಗೆ ಟಿಕಟ್ ನೀಡುವಲ್ಲಿ ಬಿ.ಕೆ. ಹರಿಪ್ರಸಾದ್ ಜಾತಿ ರಾಜಕಾರಣ ಮಾಡಿದ್ದಾರೆ. ಕೂಡಲೇ ಇಮಾಮ್ ನಿಯಾಜಿಯರನ್ನೇ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸದಿದ್ದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸದೆ ಬಿಡಲಾರೆವು ಎಂದು ಎಚ್ಚರಿಕೆ ನೀಡಿದರು.
ಮುಸ್ಲಿಂ ಸಮುದಾಯದ ಅಪಾರ ಬೆಂಬಲಿಗರು ಹಾಗೂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ನಗರದಲ್ಲಿ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದರು.