ಅವಕಾಶದ ದುರುಪಯೋಗ-ಪೊಲೀಸರು ಹೈರಾಣ

ಪುತ್ತೂರು , ಮೇ.೧- ಜನತಾ ಕರ್ಫ್ಯೂ ಇದೀಗ ಮೂರನೆ ದಿನಕ್ಕೆ ಕಾಲಿಟ್ಟಿದೆ. ಮುಂಜಾನೆ ೪ ಗಂಟೆ ಕರ್ಫ್ಯೂವಿನಲ್ಲಿ ರಿಯಾಯಿತಿ ನೀಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಜನತೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇದೀಗ ಕರ್ಫ್ಯೂ ಸಡಿಲಿಕೆಯ ಹಂತದಲ್ಲಿ ಜನರನ್ನು ನಿಗ್ರಹಿಸುವ ಹಾಗೂ ವಾಹನದಟ್ಟಣೆ ಕಡಿಮೆ ಮಾಡುವ ‘ಸವಾಲು’ ಪೊಲೀಸರನ್ನು ಹೈರಾಣಗೊಳಿಸುತ್ತಿದೆ.
ಪುತ್ತೂರು ತಾಲೂಕಿನಾದ್ಯಂತ ಈ ಸಮಸ್ಯೆ ಪೊಲೀಸರನ್ನು ಕಾಡುತ್ತಿದೆ. ಸರ್ಕಾರದ ಸೂಚನೆಯಂತೆ ಬೆಳಿಗ್ಗೆ ೬ ಗಂಟೆಯಿಂದ ೧೦ ಗಂಟೆ ತನಕ ಜನತೆಯ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಈ ಸಂದರ್ಭದಲ್ಲಿ ಅನಗತ್ಯ ಓಡಾಟ ನಡೆಸುವ ಮಂದಿಯೂ ಹೆಚ್ಚಾಗುತ್ತಿದ್ದಾರೆ. ಇದನ್ನು ತಡೆಯುವುದೇ ಪೊಲೀಸರಿಗೆ ಸಮಸ್ಯೆಯಾಗುತ್ತಿದೆ. ಪೇಟೆಗೆ ಬರುವ ಪ್ರತಿಯೊಂದು ವಾಹನವನ್ನೂ ತಪಾಸಣೆ ಮಾಡುತ್ತಿರುವ ಪೊಲೀಸರು ಇದೀಗ ಅನಗತ್ಯ ಓಡಾಟ ನಡೆಸುವ ಮಂದಿಗೆ ದಂಡ ವಿಧಿಸಲು ಆರಂಭಿಸಿದ್ದಾರೆ. ಹಾಗಿದ್ದರೂ ಸಣ್ಣಪುಟ್ಟ ಕಾರಣಗಳಿಗಾಗಿ ಪೇಟೆಗೆ ಬರುವವರನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುವ ಮಂದಿಯಿಂದಾಗಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ.
ಆದರೆ ೧೦ ಗಂಟೆಯ ನಂತರ ಹೆಚ್ಚಿನ ಒತ್ತಡಗಳಿಲ್ಲದೆ ಜನತೆ ಸ್ಪಂಧನೆ ನೀಡುತ್ತಿರುವುದು ಕಂಡುಬಂತು. ಪುತ್ತೂರು ಪೇಟೆಯೂ ಸೇರಿದಂತೆ ಉಪ್ಪಿನಂಗಡಿ, ಕಾಣಿಯೂರು, ಬೆಟ್ಟಂಪಾಡಿ ಸಹಿತ ಗ್ರಾಮೀಣ ಭಾಗಗಳಲ್ಲಿ ಜನತೆ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿಯೂ ಕರ್ಫ್ಯೂ ಸಡಿಲಿಕೆ ಸಂದರ್ಭ ಗುಂಪುಗುಂಪಾಗಿ ಓಡಾಡುತ್ತಿರುವುದು, ಮಾಸ್ಕ್ ರಹಿತ ಓಡಾಟ, ಸಾಮಾಜಿಕ ಅಂತರ ಮರೆತು ಅಂಗಡಿಗಳಲ್ಲಿ ಖರೀದಿ ಮಾಡುವುದು ನಿತ್ಯ ಕಂಡುಬರುತ್ತಿದೆ. ಒಂದೆಡೆ ಕೊರೊನಾ ಪ್ರಕರಣಗಳು ಮತ್ತಷ್ಟು ಹೆಚ್ಚಾಗುತ್ತಿದ್ದರೂ ನಿಯಮ ಉಲ್ಲಂಘನೆಯೂ ಹೆಚ್ಚಾಗುತ್ತಿದೆ. ಪುತ್ತೂರು -ಕಡಬ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ಮಾಹಿತಿಯಂತೆ ಶುಕ್ರವಾರ ೮೨ ಕೊರೊನಾ ಪ್ರಕರಣಗಳು ದಾಖಲಾಗಿವೆ.
ಈ ನಡುವೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ಸಂಜೀವ ಮಠಂದೂರು ಶುಕ್ರವಾರ ಕೊರೊನಾ ಲಸಿಕೆ ಪಡೆದುಕೊಂಡರು.