
ಸಂಜೆವಾಣಿ ವಾರ್ತೆಕೂಡ್ಲಿಗಿ. ನ.18 :- ಗ್ರಾಮೀಣ ಭಾಗದಲ್ಲಿ ಸೋಬಾನೆ, ಕೋಲಾಟ ಸೇರಿ ನಾನಾ ಕಲೆಗಳು ಅಳಿವಿನಂಚಿನಲ್ಲಿವೆ. ಇಂಥ ಕಲೆಗಳ ಪ್ರೋತ್ಸಾಹಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಾಡಿನ ಕಲಾ ಶ್ರೀಮಂತಿಕೆಯನ್ನು ಉಳಿಸುವ ಕೆಲಸ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರ ಮಾಸಾಶನ ಮಂಜೂರಾತಿ ಸಮಿತಿ ಸದಸ್ಯ ಚಿನ್ನೋಬನಹಳ್ಳಿ ಡಿ.ಒ.ಮುರಾರ್ಜಿ ತಿಳಿಸಿದರು.ತಾಲೂಕಿನ ಸಿದ್ದಾಪುರದಲ್ಲಿರುವ ಗುಡೇಕೋಟೆ ಮೊರಾರ್ಜಿ ವಸತಿ ಶಾಲೆಯಲ್ಲಿ ಕರ್ನಾಟಕ ಸಂಭ್ರಮ ೫೦ರ ಅಂಗವಾಗಿ ತಿಮ್ಮನಹಳ್ಳಿಯ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಗುರುವಾರ ನಡೆದ ಸಂಗೀತ ಹಾಗೂ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಲಾವಿದರಾಗಿ ಯಾವುದೇ ಪ್ರಕಾರದಲ್ಲಿ ಸೇವೆ ಸಲ್ಲಿಸಿ 60 ವರ್ಷ ವಯಸ್ಸಾದ ಕಲಾವಿದರು ಮಾಸಾಶನ ಮಂಜೂರಾತಿಗೆ ಅರ್ಜಿ ಸಲ್ಲಿಸಿದ ಇಲಾಖೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಸಾಹಿತಿ ಹಾಗೂ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ರವಿಕುಮಾರ್ ಮಾತನಾಡಿ, ಕರ್ನಾಟಕ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ನೆಲೆವೀಡು. ಇಂಥ ನಾಡು, ನುಡಿ, ಭಾಷೆ, ಜಲ, ನೆಲದ ಅಭಿಮಾನವನ್ನು ಕನ್ನಡಿಗರೆಲ್ಲರೂ ಹೃದಯದಲ್ಲಿಟ್ಟುಕೊಳ್ಳಬೇಕು. ಈ ಬಾರಿಯ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲೇ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳಾಗಿರುವ ಸಂಭ್ರಮ ಮನೆ ಮಾಡಿದೆ. ಕೇವಲ ನವೆಂಬರ್ ತಿಂಗಳಿಗಷ್ಟೇ ಕನ್ನಡ ಅಭಿಮಾನವಾಗದೇ ವರ್ಷಪೂರ್ತಿ ಕನ್ನಡದ ಕಂಪನ್ನು ಪಸರಿಸುವಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಭಿಮಾನ ಮೆರೆಯಬೇಕು ಎಂದರಲ್ಲದೆ, ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಅನೇಕ ಮಹನೀಯರ ತ್ಯಾಗ, ಬಲಿದಾನವನ್ನು ಸ್ಮರಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಹಾಗೂ ಪತ್ರಕರ್ತ ಭೀಮಣ್ಣ ಗಜಾಪುರ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು ಹಾಗೂ ಪಾಲಕರು ಮಾಡಬೇಕಿದೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಕುರಿತು ವಿದ್ಯಾರ್ಥಿಗಳು ಹೆಚ್ಚಾಗಿ ತಿಳಿದುಕೊಳ್ಳಬೇಕು. ಕೇವಲ ಅಂಕಗಳನ್ನು ಗಳಿಸುವುದೇ ಮಕ್ಕಳ ಉದ್ದೇಶವಾಗದೆ, ಅದರ ಜತೆ ತಮ್ಮಲ್ಲಿರುವ ಕಲೆಯನ್ನು ಅಭಿವ್ಯಕ್ತಿಸವಂತಾಗಬೇಕು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊರಾರ್ಜಿ ವಸತಿ ಶಾಲೆಯ ಪ್ರಾಚಾರ್ಯ ಜಿ.ಎಸ್.ಶಿವಕುಮಾರ್, ಹವ್ಯಾಸಿ ಸಂಶೋಧಕ ಹಾಗೂ ಪತ್ರಕರ್ತ ಭೀಮಸಮುದ್ರ ರಂಗನಾಥ ಮಾತನಾಡಿದರು. ಈ ಸಂದರ್ಭದಲ್ಲಿ ಗಾಯಕ ಹಾಗೂ ನಿವೃತ್ತ ಶಿಕ್ಷಕ ಹನುಮಂತಪ್ಪ, ಹುಡೇಂ ಕೃಷ್ಣಮೂರ್ತಿ, ಸಿದ್ದಾಪುರ ಡಿ.ಎಂ.ಈಶ್ವರಪ್ಪ, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ತಿಮ್ಮನಹಳ್ಳಿ ನಿಂಗರಾಜ್, ಗಾಯಕ ಕುರಿಹಟ್ಟಿ ರಾಜು, ಶಿಕ್ಷಕರಾದ ಡಿ.ಪ್ರವೀಣಕುಮಾರ್, ಕೆ.ದಿಲೀಪ್‌ಕುಮಾರ್, ರವಿಪ್ರಕಾಶ ನಾಯ್ಕ, ತಿಪ್ಪೇರುದ್ರಪ್ಪ, ಲಕ್ಷಿö್ಮವೆಂಕಟೇಶ್, ಎಚ್.ಅನಿತಾ, ಕೆ.ಪ್ರಕಾಶ್, ನವೀನ್ ಕುಮಾರ್, ಪ್ರಥಮದರ್ಜೆ ಸಹಾಯಕ ಮಂಜುನಾಥ, ಶುಶ್ರೂಶಕಿ ಸುಜಾತಾ, ಹಾಸ್ಟೆಲ್ ವಾರ್ಡನ್ ಎನ್.ಪಿ.ಮಧು, ಕಲಾವಿದರಾದ ಮಾಕನಡುಕು ನರಸಿಂಹ, ಭೋವಿ ನುಂಕೇಶ್, ಓಬಳೆಟ್ಟಿಹಳ್ಳಿ ನುಂಕೇಶ್ ಸೇರಿ ಇತರರಿದ್ದರು. ಭರತನಾಟ್ಯ, ಸೋಬಾನೆ, ಸುಗಮ ಸಂಗೀತ, ವಚನ ಗಾಯನ, ವೀರಗಾಸೆ ಕುಣಿತ ಸೇರಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.