ಅಳಿವಿನಂಚಿನಲ್ಲಿ ಗ್ರಾಮೀಣ ಕಲೆಗಳು


ಬಾದಾಮಿ,ಮೇ.25: ಇಂದಿನ ಆಧುನಿಕ ದಿನಮಾನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕøತಿಯ ಪ್ರಭಾವದಿಂದ ನಮ್ಮ ಪ್ರಾಚೀನ ಮತ್ತು ಗ್ರಾಮೀಣ ಕಲೆಗಳು ಅಳಿವಿನಂಚಿನಲ್ಲಿದ್ದು, ಇವುಗಳನ್ನು ಉಳಿವಿಗೆ ಇಂತಹ ಸ್ಪರ್ಧೆಗಳು ಸಹಾಯಕವಾಗುತ್ತವೆ ಎಂದು ಶ್ರೀ ಮೈಲಾರಲಿಂಗೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಯುವಮುಖಂಡ ಮಹೇಶ ಹೊಸಗೌಡ್ರ ಹೇಳಿದರು.
ಅವರು ತಾಲೂಕಿನ ಸುಕ್ಷೇತ್ರ ನೆಲವಿಗಿ ಗ್ರಾಮದಲ್ಲಿ ಶ್ರೀ ಲಕ್ಕಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಲಕ್ಕಮ್ಮದೇವಿ ಜಾತ್ರಾ ಕಮಿಟಿ ವತಿಯಿಂದ ಹಮ್ಮಿಕೊಂಡಿದ್ದ ಮುಕ್ತ ಗಡ್ಡಿ ಬಂಡಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಯುವ ಜನಾಂಗ ಮತ್ತು ರೈತಾಪಿ ಜನರು ಇಂದು ಎತ್ತು ಖರೀದಿ ಮತ್ತು ಕೃಷಿ ಪದ್ಧತಿಯಿಂದ ದೂರ ಉಳಿಯುತ್ತಿರುವುದು ಕಳವಳಕಾರಿಯಾಗಿದೆ. ನಮ್ಮ ದೇಶದ ಮೂಲ ವೃತ್ತಿ ಕೃಷಿ. ರೈತ ದೇಶದ ಬೆನ್ನೆಲುಬು. ರೈತ ಬೆಳೆದರೆ ನಾವೆಲ್ಲ ಊಟ ಮಾಡಲು ಸಾಧ್ಯ. ಎಲ್ಲರೂ ಕೃಷಿ ಪದ್ಧತಿಯನ್ನು ಮರೆಯಬಾರದು. ಗ್ರಾಮೀಣ ಭಾಗಗಳಲ್ಲಿ ಎತ್ತು ಇಲ್ಲದೇ ಯಂತ್ರೋಪಕರಣ ಮೂಲಕ ಕೃಷಿ ಪದ್ದತಿ ಮಾಡುತ್ತಿದ್ದಾರೆ. ಹಿಂದಿನಂತೆ ಎತ್ತಿನ ಮೂಲಕ ಕೃಷಿ ಚಟುವಟಿಕೆಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ಮಲ್ಲಪ್ಪ ಗಾರವಾಡ ಸೇರಿದಂತೆ ಗ್ರಾ.ಪಂ.ಸದಸ್ಯರು, ಊರಿನ ಹಿರಿಯರು, ಯುವಕರು, ರೈತರು ಹಾಜರಿದ್ದರು.