ಅಲ್ ಖೈದಾ ಮುಖ್ಯಸ್ಥ ಉಗ್ರ ಝವಾರಿ ಹತ್ಯೆ

ವಾಷಿಂಗ್ಟನ್, ಆ.೨- ೨೦೦೧ರಲ್ಲಿ ಅಮೆರಿಕಾದ ಅವಳಿ ವಾಣಿಜ್ಯ ಕಟ್ಟಡದ ಮೇಲೆ ನಡೆದಿದ್ದ ಪೈಶಾಚಿಕ ಉಗ್ರರ ದಾಳಿಯ ಮಾಸ್ಟರ್‌ಮೈಂಡ್ ಹಾಗೂ ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕ, ಅಲ್ ಖೈದಾ ಮುಖ್ಯಸ್ಥ ಐಮಾನ್ ಅಲ್-ಝವಾಹಿರಿಯನ್ನು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಅಮೆರಿಕಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದಾನೆ. ಝವಾಹಿರಿಯನ್ನು ಹತ್ಯೆ ನಡೆಸಿದ ಸಂಗತಿಯನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಖಚಿತಪಡಿಸಿದ್ದಾರೆ.ಕಾಬೂಲ್ ಮೇಲೆ ಅಮೆರಿಕಾದ ಗುಪ್ತಚರ ಸಂಸ್ಥೆ ಸಿಐಎ ಡ್ರೋನ್ ದಾಳಿ ನಡೆಸಿತ್ತು ಎಂದು ಅಮೆರಿಕದ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಅಫ್ಘಾನಿಸ್ತಾನದ ಪ್ರಮುಖ ಅಲ್ ಖೈದಾ ಗುರಿಗಳ ಮೇಲೆ ಅಮೆರಿಕ ವಾರಾಂತ್ಯದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ನಡೆಸಿತ್ತು ಎಂದು ಉನ್ನತ ಅಧಿಕಾರಿ ಬಹಿರಂಗಪಡಿಸಿದ್ದಾರೆ. ಈ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಯಾವುದೇ ನಾಗರಿಕ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ೨೦೦೧ರಲ್ಲಿ ಅವಳಿ ವಾಣಿಜ್ಯ ಕಟ್ಟಡದ ಮೇಲಿನ ದಾಳಿಯ ಪ್ರಮುಖ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾಗಿದ್ದ ಒಸಾಮಾ ಬಿನ್ ಲಾದೆನ್‌ನನ್ನು ೨೦೧೧ರಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕಾದ ವಿಶೇಷ ಸೇನಾಪಡೆ ಹೊಡೆದರುಳಿಸಿತ್ತು. ಲಾದೆನ್ ಹತ್ಯೆ ಬಳಿಕ ಇದೀಗ ಝವಾಹಿರಿಯನ್ನು ಹೊಡೆದುರುಳಿಸಿದ್ದು, ಉಗ್ರರ ವಿರುದ್ಧ ಅತೀ ದೊಡ್ಡ ಪ್ರಹಾರವಾಗಿದೆ. ಝವಾಹಿರಿ ಸಾವಿನ ಬಗ್ಗೆ ಹಲವು ಬಾರಿ ವದಂತಿಗಳು ಹುಟ್ಟಿಕೊಂಡಿದ್ದವು ಹಾಗೂ ಸುಧೀರ್ಘ ಕಾಲದಿಂದ ಅನಾರೋಗ್ಯಪೀಡಿತನಾಗಿರುವ ಬಗ್ಗೆ ಕೂಡ ವರದಿಯಾಗಿತ್ತು. ಇದೀಗ ಇದೇ ಝವಾಹಿರಿಯನ್ನು ಕ್ಷಿಪಣಿ ದಾಳಿಯ ಮೂಲಕ ಹೊಡೆದುರುಳಿಸಲಾಗಿದೆ.

ದಾಳಿ ಹೇಗೆ ನಡೆದಿತ್ತು?
೨೦೦೨ರ ಸೆಪ್ಟೆಂಬರ್ ೧೧ರ ಅಮೆರಿಕ ವಿರುದ್ಧದ ದಾಳಿಯನ್ನು ಸಂಘಟಿಸುವಲ್ಲಿ ಪಾತ್ರ ವಹಿಸಿದ್ದ ಈಜಿಪ್ಟ್ ಮೂಲದ ಝವಾಹಿರಿ ತಲೆಗೆ ೨೫ ದಶಲಕ್ಷ ಡಾಲರ್ ಬಹುಮಾನ ಘೋಷಿಸಲಾಗಿತ್ತು. ೨೦೧೧ರಲ್ಲಿ ಲಾದೆನ್‌ನನ್ನು ಅಮೆರಿಕಾ ಹತ್ಯೆ ಮಾಡಿದ ಬಳಿಕ ಅಲ್ ಖೈದಾವನ್ನು ಝವಾಹಿರಿ ಮುನ್ನಡೆಸುತ್ತಿದ್ದ. ಈ ಹಿನ್ನೆಲೆಯಲ್ಲಿ ಈತನ ಹತ್ಯೆಗೆ ಅಮೆರಿಕಾ ಹಿಂದಿನಿಂದಲೂ ಯೋಜನೆ ರೂಪಿಸಿತ್ತು. ಅಲ್ಲದೆ ಜುಲೈ ೨೫ರಂದು ಜವಾಹಿರಿ ಹತ್ಯೆಗೆ ಬೈಡೆನ್ ಅವರು ಹಸಿರುನಿಶಾನೆ ತೋರಿದ್ದರು. ಅದರಂತೆ ಜುಲೈ ೩೧ರ ರಾತ್ರಿ ೯:೪೮ರ ಸುಮಾರಿಗೆ ತನ್ನ ಕಾಬೂಲ್ ಹೊರವಲಯದ ಶೆರ್‌ಪುರ್‌ನ ನಿವಾಸದ ಬಾಲ್ಕನಿಯಲ್ಲಿದ್ದ ವೇಳೆ ಜವಾಹಿರಿಯನ್ನು ಅಮೆರಿಕಾ ಸೇನಾಪಡೆ ಎರಡು ಹೆಲ್‌ಫೈರ್ ಕ್ಷಿಪಣಿಗಳ ಮೂಲಕ ದಾಳಿ ನಡೆಸಿ, ಹೊಡೆದುರುಳಿಸಿದೆ. ದಾಳಿಯ ವೇಳೆ ಜವಾಹಿರಿ ಕುಟುಂಬಿಕರು ಈ ವೇಳೆ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.

ತಾಲಿಬಾನ್ ಖಂಡನೆ
ಸದ್ಯ ಡ್ರೋನ್ ಮೂಲಕ ನಡೆಸಿದ ಕ್ಷಿಪಣಿಯಲ್ಲಿ ಜವಾಹಿರಿ ಹತ್ಯೆಯನ್ನು ಕಾಬೂಲ್ ವಕ್ತಾರ ಝಬಿಹುಲ್ಲಾ ಮುಝಾಹಿದ್ ಖಚಿತಪಡಿಸಿದ್ದು, ಅಲ್ಲದೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಘಟನೆಯ ಸ್ವರೂಪವು ತಿಳಿದುಬಂದಿರಲಿಲ್ಲ. ಆದರೆ ಇಸ್ಲಾಮಿಕ್ ಎಮಿರೇಟ್‌ನ ಭದ್ರತೆ ಮತ್ತು ಗುಪ್ತಚರ ಸೇವೆಗಳು ಘಟನೆಯನ್ನು ತೀವ್ರ ರೀತಿಯಲ್ಲಿ ಅವಲೋಕನ ನಡೆಸಿದ ಬಳಿಕ ಇದು ಅಮೇರಿಕನ್ ಡ್ರೋನ್‌ನಿಂದ ನಡೆಸಿರುವುದು ಗೊತ್ತಾಗಿದೆ. ಅಮೆರಿಕಾ ಈ ದಾಳಿಯು ದೋಹಾ ಒಪ್ಪಂದ ಹಾಗೂ ಅಂತಾರಾಷ್ಟ್ರೀಯ ತತ್ವಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಮುಝಾಹಿದ್ ತಿಳಿಸಿದ್ದಾರೆ.

ಯುಎಸ್ ವೈರಿಗಳಿಗೆ ಬೈಡೆನ್ ಎಚ್ಚರಿಕೆ
ಝವಾಹಿರಿ ಹತ್ಯೆಯ ಸುದ್ದಿಯನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಆರಂಭಿಕರಾಗಿ ಘೋಷಿಸಿದರು. ಈ ವೇಳೆ ಪ್ರತಿಕ್ರಿಯೆ ನೀಡಿರುವ ಬೈಡೆನ್, ೨೦೦೧ರಲ್ಲಿ ಅವಳಿ ಕಟ್ಟಡದ ಮೇಲಿನ ದಾಳಿಯಲ್ಲಿ ೨೯೭೭ ಮಂದಿ ಮೃತಪಟ್ಟಿದ್ದು, ಝವಾಹಿರಿಯನ್ನು ಹೊಡೆದುರುಳಿಸುವ ಮೂಲಕ ದುರಂತದಲ್ಲಿ ಸಾವಿಗೀಡಾದವರ ಆತ್ಮಕ್ಕೆ ನ್ಯಾಯ ಸಿಕ್ಕಿದೆ. ಇನ್ನು ಮುಂದೆ ವಿಶ್ವದ ಜನತೆ ಈ ಕೊಲೆಗಾರನಿಗೆ ಭಯ ಪಡುವ ಅಗತ್ಯವಿಲ್ಲ. ಅಮೆರಿಕಾ ಜನತೆಗೆ ಹಾನಿ ಮಾಡುವವರ ವಿರುದ್ಧ ನಾವು ನಮ್ಮ ಶಕ್ತಿ-ಸಾಮರ್ಥ್ಯವನ್ನು ತೋರ್ಪಡಿಸಲಿದ್ದೇವೆ. ಹಾನಿ ಮಾಡುವವರು ಎಲ್ಲೇ ಅಡಗಿದ್ದರೂ ಅವರನ್ನು ಹುಡುಕಿ ತಕ್ಕಶಾಸ್ತಿ ಮಾಡುತ್ತೇವೆ ಎಂದು ಬೈಡನ್ ತಿಳಿಸಿದ್ದಾರೆ.