ಅಲ್ಲಾಪೂರ ಗ್ರಾಮಕ್ಕೆ ಜಿಪಂ ಉಪಕಾರ್ಯದರ್ಶಿ ಭೇಟಿ


ಹುಬ್ಬಳ್ಳಿ, ನ.13 ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮಕ್ಕೆ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ರೇಖಾ ಡೊಳ್ಳಿನವರ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ನಡೆಸಿದರು.
ಗ್ರಾಮದ ಕೆರೆ ಹೂಳೆತ್ತಿ,ಸ್ವಚ್ಛಗೊಳಿಸುವಿಕೆ ಸೇರಿದಂತೆ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುರಿ ಅವರಿಗೆ ಸೂಚನೆ ನೀಡಿದರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಜಾನುವಾರ ಕುಡಿಯುವ ನೀರಿನ ತೊಟ್ಟಿ, ಜೀವಜಲ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ವೀಕ್ಷಿಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಅಲ್ಲಾಪೂರ ಗ್ರಾಮ ಹಾಗೂ ಉತ್ಸಾಹಿ ಗ್ರಾಮ ಪಂಚಾಯತ್ ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎರೆಹುಳು ತೊಟ್ಟಿ, ಅಂಗನವಾಡಿ ಕೇಂದ್ರದಲ್ಲಿ ಚಿಕ್ಕ ಮಕ್ಕಳಿಗಾಗಿ ಅಳವಡಿಸಿದ ಆಟಿಕೆ ಸಾಮಾನುಗಳು, ಗೋಡೆ ಬರಹಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಸಹಾಯಕ ನಿರ್ದೇಶಕ ಅಜಯ್, ತಾಂತ್ರಿಕ ಸಹಾಯಕ ಶಿವಕುಮಾರ್ ಹಂಚಿನಮನಿ, ತಾಂತ್ರಿಕ ಸಂಯೋಜಕ ಶಿವಾನಂದ ಚಿಂತಕಲ್ ಮತ್ತಿತರರು ಉಪಸ್ಥಿತರಿದ್ದರು.