ಅಲ್ಲಮಪ್ರಭು ಸಂಘಕ್ಕೆ ರೂ. 46 ಲಕ್ಷ ಲಾಭ: ಕುಶಾಲರಾವ್ ಪಾಟೀಲ ಖಾಜಾಪುರ

ಬೀದರ್: ಸೆ.22:ಇಲ್ಲಿಯ ಅಲ್ಲಮಪ್ರಭು ಪತ್ತಿನ ಸಹಕಾರ ಸಂಘ ನಿಯಮಿತವು 2021-22ನೇ ಸಾಲಿನಲ್ಲಿ ರೂ. 46.47 ಲಕ್ಷ ನಿವ್ವಳ ಲಾಭ ಗಳಿಸಿದೆ.
ನಗರದ ಬಸವ ಮಂಟಪದಲ್ಲಿ ಇರುವ ಸಂಘದ ಕಚೇರಿಯಲ್ಲಿ ನಡೆದ ಸಂಘದ 20ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ ಈ ಮಾಹಿತಿ ನೀಡಿದರು.
ಸಂಘದ ಸದಸ್ಯರಿಗೆ ಲಾಭದಲ್ಲಿ ಶೇ 25 ರಷ್ಟು ಪಾಲು ಕೊಡಲಾಗುವುದು ಎಂದು ಘೋಷಿಸಿದರು.
ಸಂಘ ರೂ. 15.46 ಕೋಟಿ ದುಡಿಯುವ ಬಂಡವಾಳ ಹೊಂದಿದೆ. 2022 ರ ಮಾರ್ಚ್ 31ಕ್ಕೆ ಸದಸ್ಯರಿಗೆ ರೂ. 8.48 ಕೋಟಿ ಸಾಲ ನೀಡಲಾಗಿದೆ. ರೂ. 11.24 ಕೋಟಿ ವಿವಿಧ ರೀತಿಯ ಠೇವಣಿಗಳು ಇವೆ. ಕಾಯ್ದಿಟ್ಟ ಹಾಗೂ ಇತರ ನಿಧಿಗಳ ಮೊತ್ತ ರೂ. 3.59 ಕೋಟಿ ಆಗಿದೆ ಎಂದು ತಿಳಿಸಿದರು.
ನಗರದ ಗುಂಪಾ ರಸ್ತೆಯಲ್ಲಿ ಇರುವ ಕೆಆರ್‍ಇ ಸಂಸ್ಥೆಯ ಕಾಂಪ್ಲೆಕ್ಸ್‍ನಲ್ಲಿ ಶೀಘ್ರ ಸಂಘದ ಶಾಖೆ ಆರಂಭಿಸಲಾಗುವುದು ಎಂದು ಹೇಳಿದರು.
ಉತ್ತಮ ಸೇವೆಗಳಿಂದ ಸಂಘ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಿ ವರ್ಷ ಲಾಭದಲ್ಲಿ ಮುನ್ನಡೆದಿದೆ. ಸಂಘದ ಇನ್ನಷ್ಟು ಅಭಿವೃದ್ಧಿಗೆ ಎಲ್ಲ ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದರು.
20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕಾಯಂಗೊಳಿಸಬೇಕು ಎನ್ನುವ ಸದಸ್ಯರ ಬೇಡಿಕೆಗೆ ಸ್ಪಂದಿಸಿದ ಸಂಘದ ಉಪಾಧ್ಯಕ್ಷ ಸಂಜೀವಕುಮಾರ ಪಾಟೀಲ ಅವರು, ಈಗಾಗಲೇ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದೆ. ಸಿಬ್ಬಂದಿ ಸೇವೆ ಕಾಯಂಗೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಸದಸ್ಯರಾದ ಬಿ.ಎಸ್. ಪಾಟೀಲ, ನಾಗಶೆಟ್ಟಿ ವಗದಾಳೆ, ಕುಶಾಲ್ ಪಾಟೀಲ ಚಳಕಾಪುರ ಮಾತನಾಡಿದರು. ಸಂಘದ ಸಿಬ್ಬಂದಿ ಜಗನ್ನಾಥ ಪಾಟೀಲ ವಾರ್ಷಿಕ ವರದಿ ವಾಚಿಸಿದರು.
ನಿರ್ದೇಶಕರಾದ ವಿವೇಕಾನಂದ ಪಟ್ನೆ, ಅಶೋಕ ಶೀಲವಂತ, ಬಸವಕುಮಾರ ಪಾಟೀಲ, ಪ್ರವೀಣ ಬುಡ್ಡನೋರ, ಪ್ರಕಾಶ ನಿಂಬೂರೆ, ಸುಮನ್ ಬಿ. ಪಾಟೀಲ, ಅನುರಾಧ ವಿ. ದೇಶಮುಖ ಉಪಸ್ಥಿತರಿದ್ದರು.
ನಿರ್ದೇಶಕ ರಾಜೇಂದ್ರಕುಮಾರ ಗಂದಗೆ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರ ಸ್ವಾಮಿ ನಿರೂಪಿಸಿದರು.