
ದೆಹಲಿ, ಮಾ.೧೧- ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿನ ಹಿಂದೂ ದೇಗುಲಗಳ ಮೇಲಿನ ಸತತ ದಾಳಿಗೆ ಸಂಬಂಧಿಸಿ ಆಸ್ಟ್ರೇಲಿಯಾ ಪ್ರಧಾನಿ ಆಂಥನಿ ಅಲ್ಬನೀಸ್ ಜೊತೆ ಚರ್ಚೆ ನಡೆಸಿದ್ದೇನೆ. ಚರ್ಚೆಯಲ್ಲಿ ದೇಗುಲಗಳ ರಕ್ಷಣೆಗೆ ಸಂಬಂಧಿಸಿದಂತೆ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನಿನ್ನೆ ದೆಹಲಿಯಲ್ಲಿನ ಹೈದರಾಬಾದ್ ಹೌಸ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ದ್ವಿಪಕ್ಷೀಯ ಭೇಟಿಯ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯ ಸಮುದಾಯವು ಆಸ್ಟ್ರೇಲಿಯಾದಲ್ಲಿ ಸಾಮಾಜಿಕ ಮತ್ತು ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ. ಆದರೆ ಕಳೆದ ಕೆಲವು ವಾರಗಳಿಂದ ಆಸ್ಟ್ರೇಲಿಯಾದಲ್ಲಿ ದೇವಾಲಯಗಳ ಮೇಲಿನ ದಾಳಿಗಳು ನಿಯಮಿತವಾಗಿ ವರದಿಯಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಇಂತಹ ಸುದ್ದಿಗಳು ಸಹಜವಾಗಿಯೇ ಭಾರತೀತ ನಾಗರಿಕರನ್ನು ಚಿಂತೆಗೀಡುಮಾಡುವುದು ಮತ್ತು ನಮ್ಮ ಮನಸ್ಸನ್ನು ಕಲಕುತ್ತದೆ. ನಾನು ಈ ಭಾವನೆ ಮತ್ತು ನಮ್ಮ ಆತಂಕದ ಬಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಆಂಥನಿ ಅಲ್ಬನೀಸ್ ಜೊತೆ ಪ್ರಸ್ತಾಪಿಸಿದ್ದೇನೆ. ಮಾತುಕತೆಯ ಬಳಿಕ ಭಾರತೀಯ ಸಮುದಾಯದ ಸುರಕ್ಷತೆಯು ವಿಶೇಷ ಆದ್ಯತೆಯಾಗಿದೆ ಎಂದು ಅವರು ನನಗೆ ಭರವಸೆ ನೀಡಿದ್ದಾರೆ. ನಮ್ಮ ತಂಡಗಳು ಈ ವಿಷಯದ ಬಗ್ಗೆ ನಿಯಮಿತವಾಗಿ ಸಂಪರ್ಕದಲ್ಲಿರುತ್ತವೆ ಮತ್ತು ಸಾಧ್ಯವಾದಷ್ಟು ಸಹಕರಿಸಲಿದೆ ಎಂದು ಮೋದಿ ತಿಳಿಸಿದ್ದಾರೆ. ಕಳೆದ ಹಲವು ದಿನಗಳಲ್ಲಿ ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ವಿವಿಧ ಕಡೆಗಳಲ್ಲಿನ ಹಿಂದೂ ದೇಗುಲಗಳ ಮೇಲೆ ಖಲಿಸ್ತಾನ ಬೆಂಬಲಿಗರು ಸತತವಾಗಿ ದಾಳಿ ನಡೆಸುತ್ತಿದ್ದು, ಭಾರತ ವಿರೋಧಿ ಘೋಷಣೆಗಳನ್ನು ಕೂಡ ಗೋಡೆಯ ಮೇಲೆ ಬರೆಯುತ್ತಿದ್ದಾರೆ. ಖಲಿಸ್ತಾನ ಬೆಂಬಲಿಗರಿಗೆ ಭಾರತ ವಿರೋಧಿ, ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಕೂಡ ಎಲ್ಲಾ ರೀತಿಯಲ್ಲಿ ಬೆಂಬಲ ನೀಡುತ್ತಿದೆ ಎಂದು ಹೇಳಲಾಗಿದೆ. ಸದ್ಯ ದೇಗುಲಗಳ ಮೇಲಿನ ದಾಳಿಯನ್ನು ಪ್ರಧಾನಿ ಮೋದಿ ಅವರು ನೇರವಾಗಿಯೇ ಇದೀಗ ಆಸ್ಟ್ರೇಲಿಯಾ ಪ್ರಧಾನಿ ಜೊತೆ ಪ್ರಸ್ತಾಪಿಸಿದ್ದಾರೆ. ಅಲ್ಲದೆ ಇದಕ್ಕೆ ಆಸ್ಟ್ರೇಲಿಯಾ ಪ್ರಧಾನಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಕೂಡ ಲಭಿಸಿದೆ.