ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎಸ್. ಅಬ್ದುಲ್ ಮಜೀದ್ ಕಾಂಗ್ರೆಸ್ ಸೇರ್ಪಡೆ

ದಾವಣಗೆರೆ.ಏ.೩೦; ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಎಸ್. ಅಬ್ದುಲ್ ಮಜೀದ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ .ಸುದ್ದಿಗೋಷ್ಠಿ‌ಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ಶೇ.‌ 4 ಮೀಸಲಾತಿ ರದ್ದುಪಡಿಸಿದ್ದರಿಂದ ತೀವ್ರ ಮನನೊಂದು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು.ಮಾಜಿ ಮುಖ್ಯಮಂತ್ರಿ ಬಿ.ಎಸ್. ‌ಯಡಿಯೂರಪ್ಪ ಅಧಿಕಾರವಧಿಯಲ್ಲಿ ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕೊಂಡೊ ಯ್ಯುತ್ತಿದ್ದರು.‌  ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ನಂತರ ಪ್ರತಿ ನಿತ್ಯ ಅಲ್ಪಸಂಖ್ಯಾತ ಸಮುದಾಯವನ್ನೇ ಗುರಿ ಯಾಗಿಸಿಕೊಂಡು ಇಲ್ಲಸಲ್ಲದ ಟೀಕೆ ಮಾಡಲಾಗುತ್ತಿದೆ. ಅದನ್ನು ಖಂಡಿಸಿ ಬಿಜೆಪಿ ತೊರೆದು ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಸಮಕ್ಷಮದಲ್ಲಿ ಕಾಂಗ್ರೆಸ್ ಸೇರಿರುವುದಾಗಿ ತಿಳಿಸಿದರು.ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ ಮತ್ತು ಬಸವನಗೌಡ ಯತ್ನಾಳ್ ಮುಸ್ಲಿಂ ಸಮುದಾಯದ ಮತಗಳೇ ಬೇಡ ಎನ್ನುತ್ತಾರೆ. ‌ಬಿಜೆಪಿ ಮುಸ್ಲಿಂ ಸಮುದಾಯ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದೆ. ಹಾಗಾಗಿ ಬಿಜೆಪಿ ತೊರೆದು ಬೇಷರತ್ತಾಗಿ ಕಾಂಗ್ರೆಸ್ ಸೇರಿದ್ದೇನೆ.‌ ಅಲ್ಪಸಂಖ್ಯಾತ ಘಟಕದಲ್ಲಿ 10-15 ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ ಎಂದು ತಿಳಿಸಿದರು.ಉತ್ತರ ಬ್ಲಾಕ್ ಅಧ್ಯಕ್ಷ ಕೆ.ಜಿ. ಶಿವಕುಮಾರ್ ಮಾತನಾಡಿ, ಬಹಳ ದಿನಗಳಿಂದ ಕಾಂಗ್ರೆಸ್ ನಲ್ಲಿದ್ದ ಮಜೀದ್ ಅವರು ಕೆಲ ಕಾರಣದಿಂದ ಬಿಜೆಪಿ ಸೇರಿದ್ದರು. ಸೇವೆಯ ಉದ್ದೇಶದಿಂದ ಸೇರಿದ್ದ ಅವರು ಅಲ್ಲಿ ಜಾತಿ, ಧರ್ಮಗಳ ನಡುವೆ ಜಗಳ ವಾತಾವರಣದಿಂದ ಬೇಸತ್ತು ಬೇಷರತ್ತಾಗಿ ಕಾಂಗ್ರೆಸ್ ಸೇರಿರು ವುದನ್ನು ಸ್ವಾಗತಿಸುತ್ತಿದ್ದೇವೆ ಎಂದು ತಿಳಿಸಿದರು.ಆರೀಫ್ ಖಾನ್, ಎಸ್.ಕೆ.‌ ಜಬೀವುಲ್ಲ, ಅಬ್ದುಲ್ ಜಬ್ಬಾರ್, ರಿಯಾಜ್ ಅಹಮದ್ , ತೌಫಿಕ್, ಮುಬಾರಕ್, ಪರ್ವೀಜ್ ಇತರರು ಸುದ್ದಿಗೋಷ್ಠಿ‌ಯಲ್ಲಿದ್ದರು.