ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಖಂಡನೆ

ದಾವಣಗೆರೆ.ನ.13: ತ್ರಿಪುರಾದಲ್ಲಿ ಪ್ರಾರ್ಥನಾ ಮಂದಿರಗಳು ಮತ್ತು ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಪ್ರತಿಭಟನಾ ಸಭೆ ನಗರದಲ್ಲಿ  ಮುಸ್ಲಿಂ ಸಮಾಜದಿಂದ ಬಹಿರಂಗ ಸಭೆ ಮತ್ತು ಬೃಹತ್ ಪ್ರತಿಭಟನೆ ನಡೆಸಲಾಯಿತು.ನಗರದ ಮಂಡಕ್ಕಿ ಭಟ್ಟಿಯಲಿರುವ ಮಿಲಾದ್ ಮೈದಾನದಲ್ಲಿ ತಂಜಿಮುಲ್ ಮುಸ್ಲಿಮಿನ್ ಫಂಡ್ ಅಸೋಸಿಯೇಷನ್ ಮತ್ತು ತಂಜೀಮ್ ಉಲೆಮಾಯೆ ಅಹ್ಲೆ ಸುನ್ನತ್ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಮಾಜ ಬಾಂಧವರು, ತ್ರಿಪುರಾದಲ್ಲಿ ಮಸೀದಿಗಳು ಮತ್ತು ಅಲ್ಪ ಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆಗೆ ಕಾರಣದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು. ಮುಖಂಡ ಅಯೂಬ್ ಪೈಲ್ವಾನ್ ಮಾತನಾಡಿ, ದೇಶದಲ್ಲಿ 4600 ಹೆಚ್ಚು ಜಾತಿಗಳ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದರೆ ಇತ್ತೀಚೆಗೆ ಕೆಲ ಕೋಮುವಾದಿ ಜನರು ಮತ್ತು ಗುಂಪುಗಳು ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ದೇಶದಲ್ಲಿ ಹಿಂಸಾತ್ಮಕ ಘಟನೆಗಳು ಸಂಭವಿಸುತ್ತಿವೆ. ಇಂಥಹ ಘಟನೆಗಳನ್ನು ಸಮಾಜ ಖಂಡಿಸುತ್ತದೆ. ಅಷ್ಟೇ ಅಲ್ಲದೇ ತ್ರಿಪುರಾ ರಾಜ್ಯದಲ್ಲಿ ನಡೆದಿರುವ ಈ ಕೃತ್ಯದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ ಮಾತನಾಡಿ, ಶಾಂತಿ ಸಾಮರಸ್ಯದಿಂದ ಬಾಳುತ್ತಿರುವ ದಾವಣಗೆರೆಯ ಮುಸ್ಲಿಂ ಧರ್ಮೀಯರ ಮನವಿ ಪತ್ರವನ್ನು ರಾಷ್ಟçಪತಿಗಳಿಗೆ ನಿಯಮಾನುಸಾರ ಕಳುಹಿಸಿ ಕೊಡಲಾಗುವುದು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬರದಂತೆ, ಶಾಂತಿಯುತವಾಗಿ ಸಭೆ ನಡೆಸಿ, ಮನವಿ ಕೊಟ್ಟಿದ್ದೀರಿ. ಈ ಮೂಲಕ ನೀವು ಶಾಂತಿ ಪ್ರಿಯರು ಎನ್ನುವುದನ್ನು ತೋರಿಸಿಕೊಟ್ಟಿದ್ದೀರಿ. ಮೆರವಣಿಗೆಗೆ ಜಿಲ್ಲಾ ಪೊಲೀಸ್ ಇಲಾಖೆ ಅನುಮತಿ ನೀಡುವುದಿಲ್ಲವೆಂದಾಗ ಒಂದು ಕಡೆ ಸಭೆ ನಡೆಸಲು ನಾವು ನೀಡಿದ ಸಲಹೆಗೆ ಸ್ಪಂದಿಸಿದ್ದು ಸ್ವಾಗತಾರ್ಹ. ಮುಸ್ಲಿಂ ಧರ್ಮ ಗುರುಗಳ ಕರೆಯ ಮೇರೆಗೆ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.ಸಭೆಯಲ್ಲಿ ಮುಸ್ಲಿಂ ಧರ್ಮ ಗುರುಗಳು, ಸಮಾಜದ ಮುಖಂಡರು ಮತ್ತು ಸಹಸ್ರಾರು ಸಂಖ್ಯೆಯಲ್ಲಿ ಧಾರ್ಮಿಕ ಗುರುಗಳಾದ ಮೌಲಾನಾ ಮಹಮ್ಮದ್ ಅನೀಸ್ ರಜಾ ಖಾದ್ರಿ ಸಾನಿಧ್ಯದಲ್ಲಿ ಮೌಲಾನಾ ಶಾಹಿದ್ ರಜಾ, ಸೈಯದ್ ಮುಕ್ತಿಯಾರ್, ಮೌಲಾನಾ ಇಲಿಯಾಜ್ ಖಾದ್ರಿ, ಸಮಾಜದ ಮುಖಂಡ ಸಾಧಿಕ್ ಪೈಲ್ವಾನ್, ಸೈಯದ್ ಸೈಫುಲ್ಲಾ, ಜೆ. ಅಮಾನುಲ್ಲಾ ಖಾನ್, ಖನ್ನೀ ತಾಹೀರ್, ಸಿರಾಜ್ ಅಹಮ್ಮದ್, ಸಿ.ಆರ್. ನಸೀರ್ ಅಹಮ್ಮದ್, ಪಿ.ಕೆ. ಮುಸ್ತಾಕ್ ಅಹಮ್ಮದ್, ಎ.ಬಿ. ರಹೀಂ ಸಾಬ್, ಸೈಯದ್ ಚಾರ್ಲಿ, ಟಿ. ಅಸ್ಗರ್, ಅಹ್ಮದ್ ರಜಾ, ಭಾಷಾ ಪೈಲ್ವಾನ್, ಯು.ಎಂ. ಮನ್ಸೂರ್ ಅಲಿ, ಖಾಧರ್ ಭಾಷಾ ಧರ್ಮ ಗುರುಗಳು, ಸಮಾಜದ ಮುಖಂಡರು ಮತ್ತು ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂ ಧರ್ಮೀಯರು ಭಾಗವಹಿಸಿದ್ದರು.