
ಬೀದರ್:ಮಾ.1:ರಾಜ್ಯ ಬಿಜೆಪಿ ಸರಕಾರವು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ರಾಜ್ಯ ಕ್ರೈಸ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆನಡಿ ಶಾಂತಕುಮಾರ ಇಲ್ಲಿ ಹೇಳಿದರು.
ಇಲ್ಲಿನ ಮಂಗಲಪೇಟ್‍ನ ಮರ್ಜಾಪುರ ಗವಿ ಸ್ಥಳದಲ್ಲಿ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. ಶಿಕ್ಷಣ, ತರಬೇತಿ, ಸ್ವಯಂ ಉದ್ಯೋಗ, ಸಾಲ ಸೌಲಭ್ಯಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಿವೆ. ವಿದ್ಯಾರ್ಥಿ ವೇತನ, ಊಟ ವಸತಿಗೆ ನೆರವಾಗುವ ವಿದ್ಯಾಸಿರಿ, ಬಿಎಡ್ ಮತ್ತು ಡಿಎಡ್ ವಿದ್ಯಾರ್ಥಿಗಳಿಗೆ ನೆರವಾಗಲು ಪ್ರೋತ್ಸಾಹ ಧನ ನೀಡುವ ಯೋಜನೆಗಳಿವೆ ಎಂದು ಅಧ್ಯಕ್ಷರು ಹೇಳಿದರು.
ಬಿಜೆಪಿ ಮತ್ತು ಆರ್‍ಎಸ್‍ಎಸ್ ಕ್ರೈಸ್ತರ ವಿರೋಧಿಯಾಗಿಲ್ಲ. ಕೆಲವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು. ಕ್ರೈಸ್ತ ಸಮುದಾಯದ ಬಗ್ಗೆ ಕಾಳಜಿ ಇದ್ದಿರುವುದರಿಂದಲೇ ಬಿಜೆಪಿ ಸರಕಾರ ಕ್ರೈಸ್ತ ಸಂಸ್ಥೆಗಳಿಗೆ ಅನುದಾನ ನೀಡಿದೆ. ಕ್ರೈಸ್ತರ ಕಲ್ಯಾಣಕ್ಕಾಗಿ ಹಲವು ಯೋಜನೆ ಜಾರಿಗೊಳಿಸಿದೆ ಎಂದು ಕೆನಡಿ ಶಾಂತಕುಮಾರ ಹೇಳಿದರು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಮಾತನಾಡಿ, ರಾಜ್ಯ ಬಿಜೆಪಿ ಸರಕಾರವು ಅಲ್ಪಸಂಖ್ಯಾತರ, ಹಜ್ ಮತ್ತು ವಕ್ಫ್ ಇಲಾಖೆಯ ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಕ್ರಿಶ್ಚಿಯನ್ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಕ್ರಿಶ್ಚಿಯನ್ ಸಂಸ್ಥೆಗಳಿಗೆ ಸಮುದಾಯ ಭವನ, ಮತ್ತಿತರ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಸರಕಾರವನ್ನು ಕೋರಲಾಗಿತ್ತು. ಸರಕಾರ ಬೇಡಿಕೆಗೆ ಸ್ಪಂದಿಸಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ ಎಂದು ಸೂರ್ಯಕಾಂತ್ ಹೇಳಿದರು.
ಬೀದರ್ ನಗರದ ಕುಂಬಾರವಾಡಾದ ಕರ್ನಾಟಕ ಮೈನಾರಿಟೀಸ್ ಅರ್ಬನ್- ರೂರಲ್ ಡೆವಲಪ್‍ಮೆಂಟ್ ಸೊಸಾಯಿಟಿಗೆ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ, ಹಳೆ ಮೈಲೂರಿನ ಇಂದಿರಾಗಾಂಧಿ ಮೆಮೋರಿಯಲ್ ಎಜ್ಯುಕೇಶನ್ ಸೊಸೈಟಿ ಸಮುದಾಯ ಭವನಕ್ಕೆ 1 ಕೋಟಿ, ಬೀದರ್ ನಗರದ ಏಡನ್ ಕಾಲೋನಿಯ ಇವ್ಯಾಂಜಲಿಕಲ್ ಮೈನಾರಿಟಿ ಸೊಸೈಟಿ ಸಮುದಾಯ ಭವನಕ್ಕೆ 1 ಕೋಟಿ, ಚಾಂಬೋಳ ಮೆಥೋಡಿಸ್ಟ್ ಚರ್ಚ್ ದುರಸ್ತಿ, ನವೀಕರಣಕ್ಕೆ 25 ಲಕ್ಷ, ಬೀದರಿನ ಮಲ್ಕಾಪುರದ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ದುರಸ್ತಿ ಮತ್ತು ನವೀಕರಣಕ್ಕೆ 30 ಲಕ್ಷ, ಸೋಲಪುರ ಮೆಥೋಡಿಸ್ಟ್ ಚರ್ಚ್ ಬಳಿಯ ಸ್ಮಶಾನ ಭೂಮಿ ಆವರಣ ಗೋಡೆಗೆ 22.53 ಲಕ್ಷ, ಚಿಕಪೇಟ್ ಮೆಥೋಡಿಸ್ಟ್ ಚರ್ಚ್ ಸ್ಮಶಾನಭೂಮಿ ಆವರಣ ಗೋಡೆಗೆ 25 ಲಕ್ಷ, ಬೀದರಿನ ಇವ್ಯಾಂಜಲಿಕಲ್ ಮೈನಾರಿಟಿ ಸೊಸೈಟಿ ಸಮುದಾಯ ಭವನಕ್ಕೆ 1 ಕೋಟಿ, ಬೀದರ್ ತಾಲೂಕಿನ ಯರನಳ್ಳಿ ಗ್ರಾಮದ ಮೆಥೋಡಿಸ್ಟ್ ಚರ್ಚ್ ಸಮುದಾಯ ಭವನಕ್ಕೆ 50 ಲಕ್ಷ, ಶ್ರೀಮಂಡಲ್ ಮೆಥೋಡಿಸ್ಟ್ ಚರ್ಚ್ ಸಮಿತಿ ಸಮುದಾಯ ಭವನಕ್ಕೆ 50 ಲಕ್ಷ, ಹಳ್ಳದಕೇರಿ ಮೆಥೋಡಿಸ್ಟ್ ಚರ್ಚ್ ಸ್ಮಶಾನ ಆವರಣ ಗೋಡಗೆ 25 ಲಕ್ಷ, ಬೀದರಿನ ಹೊಸ ಟಿಡಿಬಿ ಕಾಲೋನಿ ಹಳ್ಳದಕೇರಿ ಮೆಥೋಡಿಸ್ಟ್ ಚರ್ಚ್ ಸ್ಮಶಾನ ಆವರಣ ಗೋಡೆಗೆ 25 ಲಕ್ಷ, ಬೀದರಿನ ರಾಜಗೊಂಡ ಕಾಲೋನಿ ಮೆಥೋಡಿಸ್ಟ್ ಚರ್ಚ್ ಸಮುದಾಯ ಭವನಕ್ಕೆ 1 ಕೋಟಿ, ಬೀದರಿನ ಏಡೇನ್ ಕಾಲೋನಿಯ ಕಲವೇರಿ ಜೀಸೆಸ್ ಹೀಲಿಂಗ್ ಮಿನಿಸ್ಟ್ರಿಯ ಜಾನ್ ವೃದ್ಧಾಶ್ರಮಕ್ಕೆ 27.52 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಸೂರ್ಯಕಾಂತ್ ನಾಗಮಾರಪಳ್ಳಿ ಮಾಹಿತಿ ನೀಡಿದರು.
ಬೀದರ್ ನಗರದ ಸೇಂಟ್‍ಪಾಲ್ ಮೆಥೋಡಿಸ್ಟ್ ಚರ್ಚ್ ಗವಿ ಸ್ಥಳದಲ್ಲಿ ಮಹಿಳೆ ಮತ್ತು ಪುರುಷರಿಗಾಗಿ ಪ್ರತ್ಯೇಕ ಸ್ನಾನಗೃಹ, ಶೌಚಾಲಯ ನಿರ್ಮಾಣಕ್ಕೆ ಸಹ ಸರಕಾರ ಅನುದಾನ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಪ್ರಮುಖರಾದ ರುಬಿನ್ ಲಕ್ಷ್ಮಣ, ಧೂಳಪ್ಪ ಪಾಸ್ಟರ್, ಡಾ. ಅಣ್ಣಾರಾವ್, ಶಕುಂತಲಾ ಬೆಲ್ದಾಳೆ, ಈಶ್ವರಸಿಂಗ್ ಠಾಕೂರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.