ಅಲ್ಪಸಂಖ್ಯಾತರ ಕಡೆಗಣನೆಗೆ ಕೆಪಿಸಿಸಿ ಕಾರ್ಯದರ್ಶಿ ಖಂಡನೆ

ಲಿಂಗಸುಗೂರು.ನ.೦೮- ಅಲ್ಪಸಂಖ್ಯಾತರು ಹಾಗೂ ಮೂಲ ಅಸ್ಪೃಶ್ಯರು ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿದ್ದಾರೆ. ಪಕ್ಷದ ಸಂಘಟನೆಗೆ ಹಾಗೂ ಪಕ್ಷದ ಏಳ್ಗೆಗೆ ಜಿಲ್ಲೆಯಲ್ಲಿ ದಶಕಗಳ ಕಾಲ ಹೋರಾಡಿದ ಕೀರ್ತಿ ಈ ವರ್ಗಕ್ಕೆ ಸಲ್ಲುತ್ತದೆ. ಆದರೆ, ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರು ಮಾತ್ರ ಈ ಸಮುದಾಯಗಳನ್ನು ಪರಿಗಣಿಸದೇ ಇರುವುದು ಖೇದಕರ ಸಂಗತಿಯಾಗಿದೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಷೀರುದ್ಧೀನ್ ರಾಜೀನಾಮೆಯಿಂದ ಪಕ್ಷಕ್ಕೆ ಧಕ್ಕೆಯಾಗುತ್ತದೆ. ಕೂಡಲೇ ಮುಖಂಡರು ಹಿರಿಯರ ಮನವೊಲಿಕೆ ಮಾಡುವ ಮೂಲಕ ಆಗಿರುವ ಡ್ಯಾಮೇಜನ್ನು ಸರಿ ಮಾಡಬೇಕು ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಹೆಚ್.ಬಿ.ಮುರಾರಿ ಒತ್ತಾಯಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರು ನಗರಸಭೆಗೆ ನಡೆದ ಅದ್ಯಕ್ಷ-ಉಪಾದ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅದ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ನೀಡುವುದಾಗಿ ಭರವಸೆ ಕೊಟ್ಟ ಹೈಕಮಾಂಡ್ ಕೊನೆ ಘಳಿಗೆಯಲ್ಲಿ ಇನ್ನೋರ್ವರಿಗೆ ಆ ಸ್ಥಾನ ನೀಡಿರುವುದು ಅಲ್ಪಸಂಖ್ಯಾತ ಸಮುದಾಯಕ್ಕೆ ಮಾಡಿದ ಮಲತಾಯಿಧೋರಣೆ ಆಗಿದೆ. ಪಕ್ಷದ ತತ್ವ ಸಿದ್ಧಾಂತಗಳನ್ವಯ ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿರುವ ಅಸ್ಪೃಶ್ಯ ದಲಿತ ಸಮುದಾಯ ಹಾಗೂ ಅಲ್ಪಸಂಖ್ಯಾತ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ದುರಂತವೇ ಸರಿ.
ಪಕ್ಷಕ್ಕಾಗಿ ದಶಕಗಳ ಕಾಲ ಸೇವೆ ಸಲ್ಲಿಸಿ ಜಿಲ್ಲಾ ಕೇಂದ್ರದಲ್ಲಿ ತಮ್ಮದೇ ವರ್ಚಸ್ಸು ಹೊಂದಿರುವ ಮುಖಂಡ ಬಷೀರುದ್ಧೀನ್ ಅವರು ಬೇಸರ ವ್ಯಕ್ತಪಡಿಸಿರುವುದು ಸರಿಯಷ್ಟೆ. ಆದರೆ, ರಾಜೀನಾಮೆಯೇ ಸಮಸ್ಯೆಗೆ ಪರಿಹಾರ ಆಗುವುದಿಲ್ಲ. ಪಕ್ಷದಲ್ಲಿದ್ದುಕೊಂಡೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿತ್ತು. ಆದರೆ, ಅವದು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸದೇ, ಜಿಲ್ಲಾ ಮುಖಂಡರುಗಳು ಅವರ ಮನವೊಲಿಸಲು ಮುಂದಾಗಬೇಕು. ಮನಸ್ಥಾಪಗಳನ್ನು ಬದಿಗಿಟ್ಟು ಈ ಸಮುದಾಯದ ವಿಶ್ವಾಸಕ್ಕೆ ಕಾಂಗ್ರೆಸ್ ಪಕ್ಷ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಪಕ್ಷದ ಹೈಕಮಾಂಡ್ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡುವ ಜೊತೆಗೆ ನಿಷ್ಠಾವಂತ ಕಾರ್ಯಕರ್ತರಿಗೆ ಸ್ಥಾನಮಾನ ಕೊಡುವಲ್ಲಿ ಹಿಂದೇಟು ಹಾಕಬಾರದು. ಈ ನಿಟ್ಟಿನಲ್ಲಿ ಗಂಭೀರ ಚಿಂತನೆಗಳಾಗಬೇಕೆಂದು ಮುರಾರಿ ಹೇಳಿದರು.