ಅಲ್ಪಸಂಖ್ಯಾತರ ಓಲೈಕೆ ರೈತರ ಕುತ್ತಿಗೆಗೆ ಕುಣಿಕೆ

ಬೆಂಗಳೂರು, ಡಿ. ೩೦- ಅಲ್ಪಸಂಖ್ಯಾತರ ಅಭಿವೃದ್ಧಿಗೆ ೧ ಸಾವಿರ ಕೋಟಿ ರೂ. ಅನುದಾನ ನೀಡಿರುವ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಅಲ್ಪಸಂಖ್ಯಾತರ ಓಲೈಕೆ ರೈತರ ಕುತ್ತಿಗೆಗೆ ಕುಣಿಕೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ೨ ಸಾವಿರ ರೂ. ಪರಿಹಾರ ಮೀನಾಮೇಷ ಎಣಿಸುತ್ತಿರುವ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ೧ ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದೆ ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗೆ ೧ ಸಾವಿರ ಕೋಟಿ ರೂ. ಕ್ರಿಯಾ ಯೋಜನೆ ರೂಪಿಸುವಂತೆ ಸೂಚಿಸಿರುವ ಪತ್ರಿಕಾ ವರದಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಆರ್. ಅಶೋಕ್ ಅವರು, ತಮ್ಮ ಕಲ್ಲು ಹೃದಯ ಕರಗಲು ಇನ್ನೆಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.
ಅಧಿಕಾರಕ್ಕೆ ಬಂದಾಗಲೆಲ್ಲಾ ಮುಸ್ಲಿಂ ತುಷ್ಟೀಕರಣವೇ ಕಾಂಗ್ರೆಸ್ ಅಜೆಂಡಾ ಆಗಿದೆ. ಬಹುಸಂಖ್ಯಾತರನ್ನು ೨ನೇ ದರ್ಜೆ ಪ್ರಜೆಗಳಾಗಿ ಕಡೆಗಣಿಸಲಾಗುತ್ತಿದೆ ಎಂದು ಅಶೋಕ್ ಟ್ವಿಟ್ಟರ್‌ನಲ್ಲಿ ಕಿಡಿಕಾರಿದ್ದಾರೆ.
ರೈತರು ಬರಗಾಲದ ಬವಣೆಯಿಂದ ಕಂಗಾಲಾಗಿದ್ದರೂ ಈ ಕಟುಕ ಸರ್ಕಾರಕ್ಕೆ ಕರುಣೆ ಬಂದಿಲ್ಲ. ಇದು ಸಂವೇದನೆ ಕಳೆದುಕೊಂಡಿರುವ ಜನವಿರೋಧಿ, ರೈತ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.