ಅಲ್ಪಸಂಖ್ಯಾತರ ಉಳಿವಿಗಾಗಿ ಜೆಡಿಎಸ್‌ಗೆ ಮತ ನೀಡಿ:ಶಂಶುಲ್

ತುಮಕೂರು, ಆ. ೩- ಇಮಾಮ್‌ಗಳು, ಮುತ್ತುವಲ್ಲಿಗಳು ಪತ್ವಾ ಹೊರಡಿಸಿದರೆ, ಅವರು ಹೇಳಿದ ಪಕ್ಷಕ್ಕೆ ಮತ ನೀಡುವಂತಹ ಕಾಲ ಈಗ ರಾಜ್ಯದ ಅಲ್ಪಸಂಖ್ಯಾತರಲ್ಲಿ ಬದಲಾಗಿದೆ. ಅಲ್ಪಸಂಖ್ಯಾತರು ದೇಶದಲ್ಲಿ ಉಳಿಯಬೇಕೆಂದರೆ ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಮಾತ್ರ ಎಂದು ಜೆಡಿಎಸ್‌ನ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಶಂಶುಲ್ ಹಖ್‌ಖಾನ್ ಹೇಳಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಅಲ್ಪಸಂಖ್ಯಾತ ಘಟಕದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಹಿಂದೆ ಮುಸ್ಲಿಂರಲ್ಲಿ ಶಿಕ್ಷಣದ ಕೊರತೆ ಇತ್ತು. ಮುತ್ತುವಲ್ಲಿಗಳು, ಇಮಾಮ್‌ಗಳು ಹೇಳಿದವರಿಗೆ ಹಿಂದು, ಮುಂದು ನೋಡದೆ ಮತ ಹಾಕುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ನಮ್ಮಲ್ಲಿಯೂ ಸುಶಿಕ್ಷಿತರು ಇದ್ದಾರೆ. ದೇಶದ ಆಗು, ಹೋಗುಗಳ ಪರಿಚಯ ಇದೆ. ಹಾಗಾಗಿ ಇನ್ನೊಬ್ಬರ ಪತ್ವಾಗೆ ಬೆಲೆ ಕೊಡುವ ನಿಟ್ಟಿನಲ್ಲಿ ಇಲ್ಲ. ಮದ್ರಸ, ಮಸೀದಿಗಳ ರಾಜಕೀಯಕ್ಕೆ ಈ ಬಾರಿ ಬ್ರೆಕ್ ಹಾಕುತ್ತೇವೆ ಎಂದರು.
ದೇಶದ ಮುಸ್ಲಿಂರ ಮುಂದಿರುವ ಏಕೈಕ ಆಯ್ಕೆ ಎಂದರೆ ಅದು ಜೆಡಿಎಸ್ ಮಾತ್ರ. ಎನ್.ಆರ್.ಸಿ ಸೇರಿದಂತೆ ಹಲವಾರು ಅಲ್ಪಸಂಖ್ಯಾತ ವಿರೋಧಿ ಕಾಯ್ದೆಗಳು ರೂಪಿತಗೊಂಡಿರುವುದು ಕಾಂಗ್ರೆಸ್ ಪಕ್ಷದ ಕಾಲದಲ್ಲಿ. ಇದರ ಬಗ್ಗೆ ಅರಿವಿಲ್ಲದ ನಾವು ಇಂದಿಗೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದೇವೆ. ಬದಲಾಗಿ ನಮ್ಮ ಹಿತವನ್ನು ಬಯಸುವ, ನಮ್ಮವರೇ ರಾಜ್ಯಾಧ್ಯಕ್ಷರಾಗಿರುವ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಅಧಿಕಾರಕ್ಕೆ ತಂದರೆ ಒಂದು ಸುರಕ್ಷಿತ ಭಾವನೆಯನ್ನು ನಾವೆಲ್ಲರೂ ಹೊಂದಬಹುದು ಎಂದರು.
ಬಿಜೆಪಿಯದ್ದು ಈ ದೇಶದ ದಲಿತರು, ಮುಸ್ಲಿಂರು, ಹಿಂದುಳಿದ ವರ್ಗದವರ ಬಗ್ಗೆ ಹಿಡನ್ ಅಜೆಂಡಾವಾದರೆ, ಕಾಂಗ್ರೆಸ್‌ದು ಗೊತ್ತು ಗುರಿಯಿಲ್ಲದ ಅಜೆಂಡಾ. ಹಾಗಾಗಿ ಮುಸ್ಲಿಂರಲ್ಲಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಕೆಲಸವನ್ನು ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಪಕ್ಷದಲ್ಲಿ ಯಾರು ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತ್ತಿದ್ದಾರೋ ಅವರನ್ನು ಗುರುತಿಸಿ, ಪಕ್ಷದ ಹುದ್ದೆಗಳನ್ನು ನೀಡಲಾಗುತ್ತದೆ. ಶೋಮ್ಯಾನ್‌ಗಳಿಗೆ ಇಲ್ಲಿ ಅವಕಾಶವಿಲ್ಲ. ನೀವು ಪಕ್ಷ ಬೆಳೆಸಿದರೆ, ಪಕ್ಷವೇ ನಿಮಗೆ ಅಧಿಕಾರ ನೀಡಲಿದೆ. ಹಾಗಾಗಿ ಪರಸ್ಪರ ಕೈಜೋಡಿಸಿ ಈ ಬಾರಿ ಜೆಡಿಎಸ್ ಗೆಲುವಿಗೆ ಕೆಲಸ ಮಾಡೋಣ ಎಂದರು.
ಜೆಡಿಎಸ್ ಮುಖಂಡ ಗೋವಿಂದರಾಜು ಮಾತನಾಡಿ, ತುಮಕೂರು ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದತ್ತ ಮುಸ್ಲಿಂ ಮತಗಳನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಲಾಯಿತು. ಆದರೆ ಕೊನೆಯ ಕ್ಷಣದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮತಗಳನ್ನು ಪಡೆಯುವಲ್ಲಿ ವಿಫಲವಾಯಿತು. ಈ ಬಾರಿ ಹಾಗಾಗದಂತೆ ಎಚ್ಚರಿಕೆ ವಹಿಸಬೇಕು. ಜೆಡಿಎಸ್‌ಗೆ ಅಲಸಂಖ್ಯಾತರು ಬೆಂಬಲವಾಗಿ ನಿಂತರೆ, ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕೆಳಗೆ ಇಳಿಸಬಹುದು. ಅಲ್ಪಸಂಖ್ಯಾತರ ರಕ್ಷಣೆ ಕಾಂಗ್ರೆಸ್ ಪಕ್ಷದಿಂದ ಎಂದಿಗೂ ಸಾಧ್ಯವಿಲ್ಲ. ಎನ್.ಆರ್.ಸಿ.,ಇತ್ತೀಚಿನ ಹಲಾಲ್, ಹಿಜಾಬ್ ಗಲಾಟೆಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು ತುಟಿ ಬಿಚ್ಚಲಿಲ್ಲ. ಆದರೆ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿವೇಶನದಲ್ಲಿಯೇ ಗಲಾಟೆ ಮಾಡಿದ್ದರು. ಇದನ್ನು ಪ್ರತಿಯೊಬ್ಬ ಮುಸ್ಲಿಂ ಮತದಾರರು ಅರ್ಥ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮಾತನಾಡಿ, ತುಮಕೂರು ನಗರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಲ್ಪಸಂಖ್ಯಾತರ ಮತಗಳಿದ್ದರೂ ನಗರ ಪಾಲಿಕೆಯಲ್ಲಾಗಲಿ, ತುಮಕೂರು ವಿಧಾನಸಭಾ ಕ್ಷೇತ್ರದಲ್ಲಾಗಲಿ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಸ್ಲಿಂ ಬಾಂಧವರಿಗೆ ಅತಿ ಹೆಚ್ಚು ಅಧಿಕಾರ ನೀಡಿದೆ. ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಟೂಡಾ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂರಿಗೆ ನೀಡಲಾಗಿತ್ತು. ದೇವೇಗೌಡರು ಪ್ರಧಾನಿಯಾಗಿದ್ದಾಗ ಸಿ.ಎಂ.ಇಬ್ರಾಹಿಂ ಅವರನ್ನು ನಾಗರಿಕ ವಿಮಾನಯಾನ ಸಚಿವರನ್ನಾಗಿ ಮಾಡಿದ್ದರು.ಇದನ್ನು ಅಲ್ಪಸಂಖ್ಯಾತರು ಅರ್ಥ ಮಾಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜನಪ್ಪ, ಟೂಡಾ ಮಾಜಿ ಅಧ್ಯಕ್ಷ ಸುಲ್ತಾನ್ ಅಹಮದ್, ಪಾಲಿಕೆ ಸದಸ್ಯ ಇಸ್ಮಾಯಿಲ್, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಮಹಿಳಾ ಘಟಕದ ಅಧ್ಯಕ್ಷೆ ತಾಹಿರಾ ಕುಲ್ಸಮ್, ತನ್ವಿರ್, ಮುಜಾಹಿದ್, ಲೀಲಾವತಿ, ಯಶೋಧ ಮತ್ತಿತರರು ಉಪಸ್ಥಿತರಿದ್ದರು.