ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆಗೆ ಕ್ರಮ – ಶಾಸಕ

ವಕ್ಫ್ ಮಂಡಳಿ ಅಧ್ಯಕ್ಷರಾಗಿ ಮುಕ್ತಿಯಾರ ಅಧಿಕಾರ ಸ್ವೀಕಾರ ಸಮಾರಂಭ
ರಾಯಚೂರು.ಆ.೦೬- ವಕ್ಫ್ ಅಧ್ಯಕ್ಷರಾಗಿ ಈ ಹಿಂದೆ ಸೈಯದ್ ಮುಕ್ತಿಯಾರ ಅಹ್ಮದ್ ಅವರು ಕೈಗೊಂಡ ಕೆಲಸ ಕಾರ್ಯಗಳನ್ನಾಧರಿಸಿ, ಈಗ ರಾಜ್ಯ ಸರ್ಕಾರ ಅವರಿಗೆ ಎರಡನೆ ಸಲ ಅಧ್ಯಕ್ಷರಾಗುವ ಅವಕಾಶ ಕಲ್ಪಿಸಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲೆಂದು ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ಅವರಿಂದು ವಕ್ಫ್ ಕಛೇರಿಯ ಮುಂಭಾಗದಲ್ಲಿ ವಕ್ಫ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಮುಕ್ತಿಯಾರ್ ಅವರು ಮೂರು ತಿಂಗಳ ಅಧ್ಯಕ್ಷ ಅವಧಿಯಲ್ಲಿ ಒಂದುವರೆ ಕೋಟಿ ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿದ್ದರು. ವಕ್ಫ್ ಆಸ್ಪತ್ರೆಗೆ ೮೭ ಲಕ್ಷ ನೀಡುವ ಮೂಲಕ ಇಂದು ಈ ಆಸ್ಪತ್ರೆ ಅಲ್ಪಸಂಖ್ಯಾತರ ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಿದ್ದಾರೆ.
ವಕ್ಫ್‌ನಿಂದ ೩೭ ಲಕ್ಷ ಮತ್ತು ಸರ್ಕಾರದಿಂದ ೫೦ ಲಕ್ಷ ರೂ. ಈ ಆಸ್ಪತ್ರೆ ಅಭಿವೃದ್ಧಿಗೆ ನೀಡಲಾಗಿದೆ. ನಗರದ ವಾರ್ಡ್ ೭, ೮ ಹಾಗೂ ಇನ್ನಿತರ ಭಾಗದಲ್ಲಿ ಅಲ್ಪಸಂಖ್ಯಾತರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಿಗೆ ವಕ್ಫ್ ಆಸ್ಪತ್ರೆಯಿಂದ ಭಾರೀ ಅನುಕೂಲವಾಗಿದೆ. ವಕ್ಫ್‌ನಿಂದ ಮಸ್ಜೀದ್, ದರ್ಗಾ, ಆಶ್ರಯ ಖಾನ್ ಮತ್ತು ಖಬರಸ್ಥಾನಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಗೆ ನಾನು ಮುಕ್ತಿಯಾರ ಅವರಿಗೆ ಎಲ್ಲಾ ರೀತಿಯ ನೆರವು ನೀಡಲು ಸಿದ್ಧನಾಗಿರುವುದಾಗಿ ಹೇಳಿದ ಅವರು, ಸಮಗ್ರ ಅಭಿವೃದ್ಧಿ ಮೂಲಕ ಸಮುದಾಯ ಉನ್ನತ ಸೌಲಭ್ಯಗಳನ್ನು ಪಡೆಯುವುದಕ್ಕೆ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬದ್ಧನಾಗಿರುವುದಾಗಿ ಹೇಳಿದರು.
ಮುಕ್ತಿಯಾರ್ ಅವರು ಎರಡನೆ ಅವಧಿಗೆ ಅಧ್ಯಕ್ಷರಾಗಿ ವಕ್ಫ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಸಮಾನವಾಗಿ ಕೈಗೊಳ್ಳಲಿ ಎಂದು ಹೇಳಿದ ಅವರು, ಅವರಿಗೆ ಅಗತ್ಯವಾದ ಎಲ್ಲಾ ನೆರವು ಸರ್ಕಾರದಿಂದ ದೊರೆಯುವಂತೆ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಮುಕ್ತಿಯಾರ ವಕ್ಫ್ ಮಂಡಳಿ ಅಭಿವೃದ್ಧಿಗೆ ನಾನು ಶಕ್ತಿಮೀರಿ ಪ್ರಾಮಾಣಿಕ ಕೆಲಸ ನಿರ್ವಹಿಸುವುದಾಗಿ ಹೇಳಿದ ಅವರು, ಶಾಸಕರ ನೆರವಿನಿಂದ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಂತೆ ಮಾಡಲಾಗುತ್ತದೆ.
ಮೌಲಾನಾ ಅಬ್ದುಲ್ ಕಲಾಂ ಅವರ ಶಾಲೆ ನಿರ್ಮಾಣ ಪ್ರಕ್ರಿಯೆ ಕೊನೆ ಹಂತದಲ್ಲಿದೆ. ಇದರಿಂದ ಸಮುದಾಯದ ಬಡ ಮಕ್ಕಳಿಗೆ ಅನುಕೂಲವಾಗಲಿದೆ. ಶಾಸಕರು ಈ ಶಾಲೆ ನಿರ್ಮಾಣಕ್ಕೆ ಸ್ಥಳ ಸೇರಿದಂತೆ ಸರ್ಕಾರದಿಂದ ಮಂಜೂರಾತಿ ದೊರೆಯುವಂತೆ ಸಹಕರಿಸಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಶಾಸಕರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕಡಗೋಳ ಆಂಜಿನೇಯ್ಯ, ರವೀಂದ್ರ ಜಲ್ದಾರ್, ಬಿ.ಗೋವಿಂದ, ಶ್ರೀನಿವಾಸ ರೆಡ್ಡಿ, ಸತೀಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.