ಮಧುಗಿರಿ, ಜು. ೧- ಅಲ್ಪಸಂಖ್ಯಾತ ಸಮುದಾಯದವರು ಶ್ರಮಜೀವಿಗಳು ಮತ್ತು ಶಾಂತಿ ಪ್ರಿಯರು ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ತಿಳಿಸಿದರು.
ಪಟ್ಟಣದ ಸಿರಾ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಸಮುದಾಯದವರು ಸಮಾಜದಲ್ಲಿ ಶಾಂತಿಯನ್ನು ಬಯಸುವವರು. ಪ್ರತಿಯೊಬ್ಬರೂ ಅನ್ನೋನ್ಯತೆಯಿಂದ ಬದುಕಬೇಕು ಎಂಬ ಆಶಯ ಉಳ್ಳವರಾಗಿದ್ದು, ಅವರಿಗೆ ಸಮಾಜದಲ್ಲಿ ಶಾಂತಿ, ನೆಮ್ಮದಿ ಮುಖ್ಯವಾಗಿದ್ದು, ಅದನ್ನು ದೊರಕಿಸುವ ಪ್ರಯತ್ನ ಸರ್ಕಾರ ಮಾಡಲಿದೆ ಎಂದರು.
ಅಲ್ಪಸಂಖ್ಯಾತ ಸಮುದಾಯದ ಸಹಕಾರದಿಂದ ರಾಜ್ಯ, ಜಿಲ್ಲೆ ಮತ್ತು ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆ ಉಂಟಾಗಿದ್ದು, ಮಧುಗಿರಿ ಕ್ಷೇತ್ರದಲ್ಲಿ ನನ್ನನ್ನು ಆಯ್ಕೆ ಮಾಡಲು ಎಲ್ಲ ಸಮುದಾಯದ ಜತೆಗೆ ಅಲ್ಪಸಂಖ್ಯಾತ ಬಂಧುಗಳ ಸಹಕಾರ ಹೆಚ್ಚಾಗಿತ್ತು. ಮುಸ್ಲಿಂ ಬಂಧುಗಳಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕ್ಷೇತ್ರದಲ್ಲಿ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಎಲ್ಲ ರೀತಿಯ ಸಹಕಾರ ನೀಡುವುದರ ಜತೆಗೆ ಸದಾ ನಿಮ್ಮ ಜತೆ ಇರುತ್ತೇನೆ. ಅಧಿಕಾರದ ಅನುಕೂಲ ಅಲ್ಪಸಂಖ್ಯಾತ ಸಮುದಾಯದವರ ಜತೆಗೆ ಕ್ಷೇತ್ರದ ಎಲ್ಲ ಬಡವರಿಗೆ ಸಿಗುವಂತೆ ಮಾಡುವ ಪ್ರಯತ್ನ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಾಮಿಯ ಮಸೀದಿ ಅಧ್ಯಕ್ಷ ಅಲೀಮ್, ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಆಯುಬ್, ಅಲ್ಪಸಂಖ್ಯಾತ ಮುಖಂಡರುಗಳಾದ ಶೌಕತ್, ಎಸ್.ಕೆ. ಕರೀಂ, ಸಿಕಂದರ್ ಬಾಬಾ, ಫಕ್ರುದ್ದೀನ್ ಹರ್ಷದ್, ಪುರಸಭಾ ಸದಸ್ಯರಾದ ಅಲೀಮ್, ಸಾಧಿಕ್ ಮತ್ತಿತರರು ಉಪಸ್ಥಿತರಿದ್ದರು.