
ಕಲಬುರಗಿ:ಎ.4: ಮಳಖೇಡದ ಅಲ್ಟ್ರಾಟೆಕ್ ಸಿಮೆಂಟ್ಸ್ ಗುತ್ತಿಗೆ ಕಾರ್ಮಿಕರ ಸಂಘದ ಬೇಡಿಕೆಗಳ ಕುರಿತು ಆಡಳಿತ ಮಂಡಳಿಯು ಸಕಾರಾತ್ಮಕವಾಗಿ ಸ್ಪಂಧಿಸಿದಿದ್ದರೆ, ಮುಂದಿನ ದಿನಗಳಲ್ಲಿ ಅನಿರ್ಧಿಷ್ಟ ಕಾಲ ಮುಷ್ಕರ ಕೈಗೊಳ್ಳಬೇಕಾಗುತ್ತದೆ ಎಂದು ಸಭೆಯಲ್ಲಿ ಭಾರತೀಯ ಮಜ್ದೂರ ಸಂಘ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.
ಅಲ್ಟ್ರಾಟೆಕ್ ಸಿಮೆಂಟ್ಸ್ ಗುತ್ತಿಗೆ ಕಾರ್ಮಿಕರ ಸಂಘ ಮಳಖೇಡ ಹಾಗೂ ಭಾರತೀಯ ಮಜ್ದೂರ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಭಾರತೀಯ ಮಜ್ದೂರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಲವು ನಿರ್ಣಯಗ:ನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಕಂಪನಿಯು ಸಂಘದ ಸದಸ್ಯರಿಗೆ ಕೊಡುತ್ತಿರುವ ಕಿರುಕುಳ ಮತ್ತು ಮಲತಾಯಿ ಧೋರಣೆ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಹಲವಾರು ವರ್ಷಗಳಿಂದ ಕೊಡುತ್ತಿರುವ ಕಾರ್ಮಿಕ ಹಕ್ಕಾದ 2019ನೇ ಸಾಲಿನ ಬೋನಸ್ ಕೊಡದೆ ವಂಚಿಸುತ್ತಿರುವ ಕುರಿತು ಸಂಘದ ಸದಸ್ಯರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಬಳ್ಳಾರಿಯ ಪ್ರಾದೇಶಿಕ ಕಾರ್ಮಿಕ ಆಯುಕ್ತರಿಗೆ ಮತ್ತು ಬೆಂಗಳೂರಿನ ಕಾರ್ಮಿಕ ಮುಖ್ಯ ಆಯುಕ್ತರೊಂದಿಗೆ ಎರಡು-ಮೂರು ಸಲ ಸಂಧಾನ ಸಭೆ ನಡೆದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಇದರ ಬಗ್ಗೆಯೂ ಸಭೆಯಲ್ಲಿ ಮುಖಂಡರು ದೀರ್ಘವಾಗಿ ಚರ್ಚಿಸಿದರು.
ಆಡಳಿತ ಮಂಡಳಿಯವರು ಮೇಲಿನ ಅಧಿಕಾರಿಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತ ಕಾರ್ಮಿಕರೊಂದಿಗೆ ಆಟವಾಡುತ್ತಿದ್ದಾರೆ. ಇದಲ್ಲದೆ ಕಂಪನಿಯಲ್ಲಿರುವ ಅಧಿಕಾರಿ ರೋಡರಿಗ್ ಅವರು ಕಾರ್ಮಿಕ ವಿರೋಧಿ ಧೋರಣೆಯುಳ್ಳವರಾಗಿದ್ದಾರೆ. ಕಂಪನಿಯಿಂದ ಸಿಗಬೇಕಾದ ನ್ಯಾಯಯುತ ಸೌಕರ್ಯಗಳನ್ನು ನೀಡದೆ ವಂಚಿಸುತ್ತಿದ್ದಾರೆ. ಅಲ್ಲದೇ ಸಂಘವನ್ನು ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲಾ ಸಮಸ್ಯೆಗಳನ್ನು ಕಂಪನಿಯ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರಲು ನಿಯೋಗವನ್ನು ಕಳುಹಿಸಿ ಕೊಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಇನ್ನು ಮುಂದೆ ಕಂಪನಿಯಲ್ಲಿ ನಿಯಮಕ್ಕನುಸಾರವಾಗಿ ಕೆಲಸ ಮಾಡಲು ತೀರ್ಮಾನಿಸಲಾಯಿತು. ಕಂಪನಿಯಲ್ಲಿ ಸುಮಾರು 20-25 ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿಯೇ ಕೆಲಸ ಮಾಡುವ ನೂರಾರು ಕಾರ್ಮಿಕರಿದ್ದಾರೆ. ಅವರನ್ನು ನಿಯಮಾನುಸಾರ ಕಂಪನಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ 3-4 ವರ್ಷ ಕೆಲಸ ಮಾಡಿದವರಿಗೆ ಕಂಪನಿಯ ಖಾಯಂ ನೌಕರರನ್ನಾಗಿ ಮುಂಬಡ್ತಿ ನೀಡಬೇಕು. ಆದರೆ ಕಂಪನಿಯು ನಿಯಮಗಳನ್ನು ಪಾಲಿಸದೆ ಇರುವುದರಿಂದ ಖಾಯಂ ನೌಕರರೆಂದು ಮುಂಬಡ್ತಿ ನೀಡಲು ಒತ್ತಾಯಿಸಲು ಹಕ್ಕು ಮಂಡಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.
ಈಗಾಗಲೇ ಸಂಘದ ವತಿಯಿಂದ ಈ ಸಮಸ್ಯೆಗಳ ಪರಿಹಾರಕ್ಕಾಗಿ ಮುಷ್ಕರ ನಡೆಸುವ ಕುರಿತು ಆಡಳಿತ ಮಂಡಳಿಗೆ ತಿಳಿಸಿದಾಗಲೆಲ್ಲ ಸಂಧಾನ ಸಭೆ ನಡೆಸುವ ನೆಪದಲ್ಲಿ ಸಭೆ ನಡೆಸುತ್ತಾರೆ. ಬೋನಸ್ ಬೇಡಿಯ ಕುರಿತು ಯಾವುದೇ ನಿರ್ಣಯ ತೆಗೆದುಕೊಳ್ಳದೆ ಸಭೆಯನ್ನು ಬರಖಾಸ್ತುಗೊಳಿಸುತ್ತಾರೆ. ಆದ್ದರಿಂದ ಶೀಘ್ರ ನಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಆಡಳಿತ ಮಂಡಳಿಯು ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಅನಿರ್ಧಿಷ್ಟ ಕಾಲ ಮುಷ್ಕರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಭಾರತೀಯ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ಆವಂತಿ ಸೂಗಣ್ಣ, ಮರೆಪ್ಪ ಪೂಜಾರಿ, ಜೆ.ಆರ್. ನಂದೂ, ಜಗದೀಶ್ವರಯ್ಯ, ಶರಣಪ್ಪ ಸಜ್ಜನ, ನಾಗೇಂದ್ರ ಹಾಲಗೇರಿ, ರಾಮು ಜಾಧವ, ಪ್ರಭುರಾವ ಮಗಿ, ಖಲೀಲ ಬಿ ಕೊತ್ವಾಲ್, ಸುರೇಶ ರೆಡ್ಡಿ, ಅಮರನಾಥ, ಶ್ರೀ ಶಂಕರ ಸುಲೇಗಾಂವ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದರು.