ಅಲೆಮಾರಿ ಬದುಕಿನ ಬುಡಬುಡಕೆಗಳು.”

ಕೊಟ್ಟೂರು ನ, 4: ಬುಡಬುಡಿಕೆ, ಗೊಂದಲಿಗರು, ಗೊಂದ್ರೆ, ಎಂದು ಕರೆಯಲಾಗುವ ಅಲೆಮಾರಿ ಜನಾಂಗದವರೆ ಈ ಬುಡಬುಡಕೆಗಳು. ಜನರ ಭವಿಷ್ಯವನ್ನು ಹೇಳುತ್ತಾ ತಮ್ಮ ಹಾಗೂ ತಮ್ಮ ಕುಬುಂಬದ ಭವಿಷ್ಯ ರೂಪಿಸಿಕೊಳ್ಳುತ್ತಿರುವ ಈ ಜನಾಂಗದ ಮೂಲ ಮಹರಾಷ್ಟ್ರ.ಶಿವಾಜಿ ಮಹರಾಜರ ಆಸ್ಥಾನದಲ್ಲಿದ್ದ ಈ ಜನಾಂಗದ ಪೂರ್ವಜರು ನಂತರ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಾ ಊರೂರು ಅಲೆದಾಡುತ್ತಾ ಕರ್ನಾಟಕಕ್ಕೂ ಬಂದರು. ಇವರು ಹೆಚ್ಚಾಗಿ ಅಕ್ಷರಸ್ಥರಲ್ಲ. ಆದರೆ ಇತ್ತೀಚೆಗೆ ಸಾಕ್ಷರರಾಗಿ ಸರಕಾರಿ ಸೇವಕರೂ ಕೂಡಾ ಆಗುತ್ತಿದ್ದಾರೆ. ಅಲ್ಲದೆ ಒಂದು ಊರಿನಲ್ಲಿ ಇರಲು ಪ್ರಯತ್ನಿಸುತ್ತಿದ್ದಾರೆ.
ಜನರ ಭವಿಷ್ಯ ಹೇಳಲಿಕ್ಕಾಗಿ ಊರೂರು ಅಲೆಯುತ್ತಾರೆ. ಯಾವ ಊರಿನಲ್ಲಿ ಇರುತ್ತಾರೊ ಆ ಊರಿನ ಸ್ಮಶಾನದಲ್ಲಿ ಹಾಲಕ್ಕಿ ನುಡಿದರೆ ಪಣ ಕಟ್ಟುತ್ತಾರೆ. ಒಂದು ವೇಳೆ ಆ ಊರಲ್ಲಿ ಹಾಲಕ್ಕಿ ನುಡಿಯದೆ ಇದ್ದರೆ ಪಣಕಟ್ಟುವದಿಲ್ಲ. ಹಾಲಕ್ಕಿ” ಕಿಲಿ ಬಿಲಿ ” ಎಂದು ಸದ್ದು ಮಾಡುತ್ತಿದ್ದರೆ ಮಾತ್ರ ಪಣಕಟ್ಟುತ್ತಾರೆ.
ಹಾಲಕ್ಕಿ, ಗೂಗೆ, ಕಾಗೆ, ರತ್ನ ಪಕ್ಷಿ, ಹಲ್ಲಿ, ಗಿಳಿ, ಗೊರವಂಕ, ಪಾರಿವಾಳ, ಹುಂಜ’ ಹೀಗೆ 9 ಪ್ರಾಣಿಪಕ್ಷಿಗಳ ಧ್ವನಿಯನ್ನು ಆಧರಿಸಿ ಶಕುನ ಕಟ್ಟುತ್ತಾರೆ. ಕನಿಷ್ಟ 3 ದಿನ ಊರಲ್ಲಿ ಪಣಕಟ್ಟಿ ಮುಂದೆ ಆಗುವ ಭವಿಷ್ಯವನ್ನು ಇವರು ಊಹಿಸುತ್ತಾರೆ. ಪಣವನ್ನು ರಾತ್ರಿ 1 ರಿಂದ 4 ಫಂಟೆಗಳ ಅವಧಿಯಲ್ಲಿ ಊರಿನಲ್ಲಿ ‘ ಗುರುನಾಥರ ಪದ, ಶರಣರ ಪದ, ಗೊಂದಲಿಗರ ಪದಗಳನ್ನು, ದೀಪ ಹಿಡಿದು ಹಾಡುತ್ತಾ ಊರೆಲ್ಲ ಸುತ್ತಿ ಭವಿಷ್ಯ ನಿರ್ಧರಿಸುತ್ತಾರೆ.
ಅಲ್ಲದೆ ಮಂಗಳ ರಾಹು ಕೇತು ಇವುಗಳ ಆಧಾರದ ಮೇಲೆ ಊಹಿಸಿ ಅನುಭವದ ಮೂಲಕ ಭವಿಷ್ಯ ಹೇಳುತ್ತಾರೆ. ಜೊತೆ ಜೊತೆಗೆ ಹಸ್ತಸಾಮುದ್ರಿಕಾ, ಪಂಚಾಂಗ’ ಹಾಗೂ ಮುಖ ಲಕ್ಷಣಗಳ ಮೂಲಕವೂ ಭವಿಷ ಹೇಳುತ್ತಾರೆ.
ಊರಿನ ಭವಿಷ್ಯ, ವೈಯಕ್ತಿಕ ಭವಿಷ್ಯ ಹಾಗೂ ಮನೆಮನೆತನಗಳ ಭವಿಷ್ಯವನ್ನು ಪಣದ ಆಧಾರದ ಮೇಲೆ ವಿವರಿಸುತ್ತಾರೆ. ಇದೆ ಇವರ ವೃತ್ತಿ ಆಗಿದ್ದರಿಂದ ಪಣಕಟ್ಟಿದ ನಂತರ ಊರಲ್ಲಿ ಸುಮಾರು 10-15 ದಿನ ಭವಿಷ್ಯ ಹೇಳುತ್ತಾ ಭಿಕ್ಷೆ ಬೇಡುತ್ತಾರೆ. ಇದೆ ಇವರ ಆದಾಯವಾಗಿದೆ. ಉಳಿದ ಸಮಯದಲ್ಲಿ ಯಾರಾದರೂ ಊರಿನವರು ಕರೆದರೆ ಆ ಊರಿಗೆ ಹೋಗಿ,ಗೊಂದಲಿಗರಪದ, ರಾಜರ ಕಥೆ, ರಾಮಾಯಣ ಮತ್ತು ಮಹಾಭಾರತ ಕಥೆಗಳನ್ನು ಹಾಡುಗಳ ಮೂಲಕ ರಂಜಿಸಿ ಆದಾಯ ಪಡೆಯುವದೂ ಉಂಟು.
ಈ ಬುಡಬುಡಿಕೆಗಳು ತಮ್ಮ ವಿದ್ಯೆ ಕಲಿಯಲು ಪಂಡರಾಪುರಕ್ಕೆ ಹೋಗುವುದು ವಾಡಿಕೆ. ಇವರಲ್ಲಿ ಹೆಚ್ಚಿನವರು ಸಂತರೆ ಆಗಿರುತ್ತಾರೆ. ಪಂಡರಾಪುರದಲ್ಲಿ ಜೋತಿಷ್ಯ ಮತ್ತು ಪಂಚಾಗ ವಿದ್ಯ ಕಲಿಯುತ್ತಾರೆ. ಅಲ್ಲದೆ ಪ್ರತೀ ವರ್ಷ ಕಾರ್ತಿಕ ಮಾಸದಲ್ಲಿ ಅಲ್ಲಿಗೆ ಹೋಗಿ ಬರುವುದೂ ಉಂಟು